ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಸಲ್ಲಿಸಲು ಹೀಗೆ ಮಾಡಿ…

ಸಮಗ್ರ ನ್ಯೂಸ್: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಹೆಚ್ಚು ಜನಪ್ರಿಯತೆ ಪಡೆದಿರುವ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳಲ್ಲಿ ಮಹತ್ವದ ಬದಲಾವಣೆ ತರಲು ಸರ್ಕಾರ ಮುಂದಾಗಿದೆ. ಈ ಎರಡೂ ಯೋಜನೆಗಳ ಫಲಾನುಭವಿಗಳು ಮುಂದುವರಿದು ಸೌಲಭ್ಯ ಪಡೆಯಬೇಕಾದರೆ ಹೊಸದಾಗಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗುವ ಸಾಧ್ಯತೆ ಇದೆ.

. Ad Widget . Ad Widget

ಸರ್ಕಾರದ ಪ್ರಕಾರ, ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳಲ್ಲಿ ನಕಲಿ ಫಲಾನುಭವಿಗಳ ಸಂಖ್ಯೆ ಹೆಚ್ಚುತ್ತಿರುವುದು ಕಂಡುಬಂದಿದೆ. ಹೀಗಾಗಿ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಅನರ್ಹರನ್ನು ಹೊರಗಿಡುವ ಉದ್ದೇಶದಿಂದ ಮರು ನೋಂದಣಿ ಪ್ರಕ್ರಿಯೆ ಕೈಗೊಳ್ಳಲು ನಿರ್ಧರಿಸಲಾಗಿದೆ.

. Ad Widget . . Ad Widget . Ad Widget

ಪ್ರಸ್ತುತ ಗೃಹಲಕ್ಷ್ಮಿ ಯೋಜನೆಯಲ್ಲಿ ಸುಮಾರು 1.28 ಕೋಟಿ ಮಹಿಳೆಯರು ಫಲಾನುಭವಿಗಳಾಗಿದ್ದಾರೆ. ಆದರೆ ಇವರಲ್ಲಿ ಸುಮಾರು 4.30 ಲಕ್ಷ ಮಂದಿ ಆದಾಯ ತೆರಿಗೆ ಪಾವತಿದಾರರಾಗಿರುವುದು ಪತ್ತೆಯಾಗಿದೆ ಎಂದು ಸರ್ಕಾರ ತಿಳಿಸಿದೆ. ಅಲ್ಲದೆ ಮೃತಪಟ್ಟ ವ್ಯಕ್ತಿಗಳ ಖಾತೆಗಳಿಗೆ ಸಹ ಯೋಜನೆಯ ಹಣ ಜಮೆಯಾಗುತ್ತಿರುವ ಆರೋಪ ಕೇಳಿಬಂದಿದೆ. ಅಂದಾಜು 100 ಕೋಟಿ ರೂಪಾಯಿಗೂ ಹೆಚ್ಚು ಹಣ ಮೃತರ ಖಾತೆಗಳಿಗೆ ವರ್ಗಾವಣೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಯೋಜನೆಯ ನೈಜ ಫಲಾನುಭವಿಗಳನ್ನು ಗುರುತಿಸಲು ಹೊಸ ಅರ್ಜಿ ಸಲ್ಲಿಕೆ ಕಡ್ಡಾಯಗೊಳಿಸುವಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ.

ಇನ್ನೊಂದೆಡೆ, ಗೃಹಜ್ಯೋತಿ ಯೋಜನೆಯಡಿ 1.68 ಕೋಟಿಗೂ ಹೆಚ್ಚು ಗ್ರಾಹಕರು ನೋಂದಾಯಿತರಾಗಿದ್ದಾರೆ. ಈ ಯೋಜನೆಯಲ್ಲಿಯೂ ಕೆಲವರು ಒಂದಕ್ಕಿಂತ ಹೆಚ್ಚು ವಿದ್ಯುತ್ ಮೀಟರ್‌ಗಳ ಮೂಲಕ ಸೌಲಭ್ಯ ಪಡೆಯುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ವಾಸ್ತವವಾಗಿ ಆ ಮನೆಯಲ್ಲಿ ಯಾರು ವಾಸಿಸುತ್ತಿದ್ದಾರೆ, ಕರ್ನಾಟಕದವರೇ ಅಥವಾ ಹೊರ ರಾಜ್ಯದವರೇ ಎಂಬುದನ್ನು ಪರಿಶೀಲಿಸುವ ಉದ್ದೇಶದಿಂದ ಸರ್ಕಾರ ಮರು ಪರಿಶೀಲನೆ ನಡೆಸಲು ಮುಂದಾಗಿದೆ.

ಈ ಕುರಿತು ಮಾತನಾಡಿರುವ ಡಿ.ಕೆ. ಶಿವಕುಮಾರ್, “ಗೃಹಜ್ಯೋತಿ ಯೋಜನೆ ಮನೆ ಬಳಕೆಗೆ ಮಾತ್ರ ಅನ್ವಯಿಸುತ್ತದೆ. ಮನೆ ಮತ್ತು ಅಂಗಡಿ ಒಂದೇ ಕಟ್ಟಡದಲ್ಲಿದ್ದರೆ, ವ್ಯಾಪಾರ ಉದ್ದೇಶದ ವಿದ್ಯುತ್ ಬಳಕೆಗೆ ಪ್ರತ್ಯೇಕ ಮೀಟರ್ ಹೊಂದಿರಬೇಕು. ವ್ಯವಹಾರಕ್ಕಾಗಿ ಸರ್ಕಾರದ ಸಬ್ಸಿಡಿ ನೀಡಲು ಸಾಧ್ಯವಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ, ಹೊಸದಾಗಿ ಅರ್ಜಿ ಸಲ್ಲಿಸಿ ಅರ್ಹತೆ ದೃಢಪಡಿಸಿಕೊಂಡವರಿಗೆ ‘ಗ್ಯಾರಂಟಿ ಕಾರ್ಡ್’ ವಿತರಿಸುವ ಯೋಜನೆಯೂ ಸರ್ಕಾರದ ಪರಿಶೀಲನೆಯಲ್ಲಿದೆ.

ಹೊಸ ಅರ್ಜಿ ಪ್ರಕ್ರಿಯೆ ಹೇಗಿರಲಿದೆ?

ಗೃಹಲಕ್ಷ್ಮಿ ಯೋಜನೆಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೊಸ ಅರ್ಜಿ ನಮೂನೆಯನ್ನು ಸಿದ್ಧಪಡಿಸಿದೆ. ಈ ಅರ್ಜಿಯನ್ನು ಸರ್ಕಾರ ಹಾಗೂ ಹಣಕಾಸು ಇಲಾಖೆಯ ಅನುಮೋದನೆಗಾಗಿ ಕಳುಹಿಸಲಾಗಿದೆ. ಅಂತಿಮವಾಗಿ ಮುಖ್ಯಮಂತ್ರಿ ಅನುಮೋದನೆ ನೀಡಿದ ಬಳಿಕ ಅರ್ಜಿ ನಮೂನೆ ಜಾರಿಯಾಗಲಿದೆ.

ಹೊಸ ಅರ್ಜಿಯಲ್ಲಿ ಸುಮಾರು 8 ರಿಂದ 10 ಪ್ರಶ್ನೆಗಳು ಇರಲಿದ್ದು, ಫಲಾನುಭವಿಗಳು ಬಯೋಮೆಟ್ರಿಕ್ ಪರಿಶೀಲನೆಯೊಂದಿಗೆ ಅಗತ್ಯ ಮಾಹಿತಿಯನ್ನು ನೀಡಬೇಕಾಗುತ್ತದೆ.

ಅರ್ಜಿಯಲ್ಲಿ ಕೇಳಬಹುದಾದ ಪ್ರಮುಖ ವಿವರಗಳು

  • ಮನೆಯ ಯಜಮಾನಿಯ ಹೆಸರು ಹಾಗೂ ಆಧಾರ್ ಸಂಖ್ಯೆ
  • ಬ್ಯಾಂಕ್ ಖಾತೆ ವಿವರಗಳು
  • ಕುಟುಂಬದಲ್ಲಿ ಇದುವರೆಗೆ ಎಷ್ಟು ಮಂದಿ ಗೃಹಲಕ್ಷ್ಮಿ ಸೌಲಭ್ಯ ಪಡೆದಿದ್ದಾರೆ?
  • ಜಾತಿ ವಿವರ
  • ಪತಿಯ ಹೆಸರು ಹಾಗೂ ಆಧಾರ್ ಸಂಖ್ಯೆ
  • ಆಧಾರ್ ಕಾರ್ಡ್ ದಾಖಲಾತಿ
  • ಆದಾಯ ತೆರಿಗೆ ಅಥವಾ ಜಿಎಸ್‌ಟಿ ಪಾವತಿದಾರರೇ?
  • ಎಪಿಎಲ್ ಅಥವಾ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದೀರಾ?

ಅರ್ಜಿ ಸಲ್ಲಿಕೆ ಎಲ್ಲೆಲ್ಲಿ?:
ಹೊಸ ಅರ್ಜಿ ಸಲ್ಲಿಕೆಗೆ ಸರ್ಕಾರ ಶೀಘ್ರದಲ್ಲೇ ಅವಕಾಶ ನೀಡುವ ನಿರೀಕ್ಷೆಯಿದೆ. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳ ಜೊತೆಗೆ ಆಫ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಜೊತೆಗೆ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ಪದಾಧಿಕಾರಿಗಳಿಗೆ ಅರ್ಜಿ ಸಂಗ್ರಹಣೆ ಜವಾಬ್ದಾರಿ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಆದರೆ ಅರ್ಜಿ ಸಲ್ಲಿಕೆ ಯಾವ ದಿನಾಂಕದಿಂದ ಆರಂಭವಾಗಲಿದೆ ಹಾಗೂ ಸರ್ಕಾರ ಯಾವ ಮಾರ್ಗಸೂಚಿಗಳನ್ನು ಪ್ರಕಟಿಸಲಿದೆ ಎಂಬುದರ ಕುರಿತು ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಸರ್ಕಾರದ ಮುಂದಿನ ಪ್ರಕಟಣೆಯತ್ತ ಲಕ್ಷಾಂತರ ಫಲಾನುಭವಿಗಳು ಕಾದು ನೋಡುತ್ತಿದ್ದಾರೆ.

Leave a Comment

Your email address will not be published. Required fields are marked *