ಸಮಗ್ರ ನ್ಯೂಸ್: ಪ್ರಸಿದ್ಧ ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ನಲ್ಲಿ ಬೀಳಿಸಿ ಬ್ಲಾಕ್ಮೇಲ್ ಮಾಡಿದ್ದಲ್ಲದೆ, ಕೋಟ್ಯಂತರ ರೂಪಾಯಿ ಪೀಕಿಸಿಕೊಂಡ ಘಟನೆ ನಡೆದಿದ್ದು ಮಂಗಳೂರಿನ ಉರ್ವ ಪೊಲೀಸರು ಕಾಂಗ್ರೆಸ್ ಮುಖಂಡ ಸೇರಿದಂತೆ ಇಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಝಾಮ್ ಮತ್ತು ಆತನ ಸ್ನೇಹಿತ ಜಿತೇಶ್ ಬಂಧಿತರು. 2024ರಲ್ಲೇ ಉದ್ಯಮಿಗೆ ಹನಿಟ್ರ್ಯಾಪ್ ಖೆಡ್ಡಾ ತೋಡಿದ್ದ ಆರೋಪಿಗಳು 2026ರ ವರೆಗೂ ಜಿತೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ನಾಟಕವಾಡಿ ಬರೋಬ್ಬರಿ ₹2.77 ಕೋಟಿ ದೋಚಿದ್ದಾರೆ.
ಜಿತೇಶ್, ಉದ್ಯಮಿ ಜೊತೆ ಆಪ್ತವಾಗಿ ವರ್ತಿಸಿದ್ದ ಅಶ್ಲೀಲ ವಿಡಿಯೋವನ್ನು ಗುಪ್ತವಾಗಿ ರೆಕಾರ್ಡ್ ಮಾಡಿಕೊಂಡು ಪತ್ನಿಗೆ ವಿಡಿಯೋ ತೋರಿಸುವುದಾಗಿ ಬೆದರಿಸಿ ₹35 ಲಕ್ಷ ಪೀಕಿದ್ದ. ಆದರೆ ಮತ್ತೆ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ಉದ್ಯಮಿ, ಯುವ ಕಾಂಗ್ರೆಸ್ ಮುಖಂಡ ನಿಝಾಮ್ಗೆ ತಿಳಿಸಿ ಬಚಾವ್ ಮಾಡುವಂತೆ ತಿಳಿಸಿದ್ದ. ಆದರೆ ನಿಜಾಮ್ ಕೂಡ ಜಿತೇಶ್ ಜೊತೆ ಸೇರಿ ಉದ್ಯಮಿಯನ್ನೇ ಬ್ಲ್ಯಾಕ್ಮೇಲ್ ಮಾಡಲು ಇಳಿದಿದ್ದರು. ಈಚೆಗೆ ಉದ್ಯಮಿ ಹೆಸರು ಬರೆದು ಜಿತೇಶ್ ಆತ್ಮ೧ಹತ್ಯೆ ಮಾಡಿಕೊಂಡಿದ್ದಾಗಿ ನಿಝಾಮ್ ಬೆದರಿಸಿದ್ದ. ಆ ಬಳಿಕ ಮಂಗಳೂರಿನಲ್ಲಿ ಉದ್ಯಮಿ ಕಣ್ಣಿಗೆ ಜಿತೇಶ್ ಕಾಣಿಸಿದ್ದು, ಕೂಡಲೇ ಮಂಗಳೂರಿನ ಉರ್ವ ಪೊಲೀಸ್ ಠಾಣೆಗೆ ಉದ್ಯಮಿ ದೂರು ನೀಡಿದ್ದಾರೆ. ಪೊಲೀಸರು ಜಿತೇಶ್ ಹಾಗೂ ನಿಝಾಮ್ನನ್ನು ಬಂಧಿಸಿದ್ದಾರೆ.
ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆ, ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವದಿಂದ ನಿಝಾಂನನ್ನು ತಕ್ಷಣದಿಂದಲೇ ಉಚ್ಛಾಟನೆ ಮಾಡಿರುವುದಾಗಿ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ತಿಳಿಸಿದ್ದಾರೆ.








