ವಿರಾಟ ದರ್ಶನಕ್ಕೆ ಕಕ್ಕಾಬಿಕ್ಕಿಯಾದ ಕೆಕೆಆರ್| ಆರ್ ಸಿಬಿಗೆ ಭರ್ಜರಿ ಜಯ

ಸಮಗ್ರ ನ್ಯೂಸ್: ಸತತ ಎರಡು ಪಂದ್ಯಗಳಲ್ಲಿ ಸೊನ್ನೆ ಸುತ್ತಿದ್ದ ವಿರಾಟ್ ಕೊಹ್ಲಿ ಬುಧವಾರ ಶತಕ ಗಳಿಸಿ ತಮ್ಮ ಅಭಿಮಾನಿಗಳ ಮನಕ್ಕೆ ಮುದ ನೀಡಿದರು. ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 193 ರನ್‌ಗಳ ಗುರಿ ಬೆನ್ನಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 6 ವಿಕೆಟ್‌ಗಳಿಂದ ಗೆದ್ದಿತು.

Ad Widget ... ..

ವಿರಾಟ್ 60 ಎಸೆತಗಳಲ್ಲಿ 105 ರನ್ ಗಳಿಸಿದರು. ಅದರಲ್ಲಿ 11 ಬೌಂಡರಿಮತ್ತು 3 ಸಿಕ್ಸರ್‌ ಇದ್ದವು. ‘ಚೇಸ್‌ ಮಾಸ್ಟರ್‌’ ವಿರಾಟ್ ಮತ್ತು ಕನ್ನಡಿಗ ದೇವದತ್ತ ಪಡಿಕ್ಕಲ್ (37; 27ಎ) ಅವರು ಎರಡನೇ ವಿಕೆಟ್ ಜೊತೆಯಾಟದಲ್ಲಿ 92 ರನ್ ಸೇರಿಸಿದ್ದರಿಂದ ಗೆಲುವಿನ ಹಾದಿ ಸರಾಗವಾಯಿತು.

Ad Widget

ಅಷ್ಟೇ ಅಲ್ಲ. 16 ಅಂಕ ಗಳಿಸಿದ ತಂಡವು ಪಾಯಿಂಟ್ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿತು. ಗುಜರಾತ್ ಟೈಟನ್ಸ್‌ ಕೂಡ 16 ಪಾಯಿಂಟ್ ಹೊಂದಿದೆ. ಆದರೆ ಆರ್‌ಸಿಬಿಯ ನಿವ್ವಳ ರನ್‌ ರೇಟ್ ಗುಜರಾತ್‌ಗಿಂತ ಚೆನ್ನಾಗಿದೆ. ಇದರೊಂದಿಗೆ ಪ್ಲೇಆಫ್‌ ಹೊಸ್ತಿಲಿಗೂ ಬಂದು ನಿಂತಿತು.

ವಿರಾಟ್ ಅವರು ಐಪಿಎಲ್‌ನಲ್ಲಿ ಅತಿ ಹೆಚ್ಚು ‍ಪಂದ್ಯಗಳನ್ನು (279) ಆಡಿದ ದಾಖಲೆ ಮಾಡಿದರು. ಈ ಹಾದಿಯಲ್ಲಿ ಮಹೇಂದ್ರಸಿಂಗ್ ಧೋನಿ (278) ಅವರನ್ನು ಹಿಂದಿಕ್ಕಿದರು. 2008ರಿಂದ ಟೂರ್ನಿಯಲ್ಲಿ ಆಡುತ್ತಿರುವ ಅವರು 9ನೇ ಶತಕ ದಾಖಲಿಸಿದರು. ಈ ಸಾಧನೆ ಮಾಡಿದ ಟೂರ್ನಿಯ ಮೊದಲ ಬ್ಯಾಟರ್ ಕೂಡ ಅವರಾದರು.

ಮಳೆಯಿಂದಾಗಿ ವಿಳಂಬವಾಗಿ ಆರಂಭವಾದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಅಂಗಕ್ರಿಷ್ ರಘುವಂಶಿ ಚೆಂದದ ಅರ್ಧಶತಕ ಗಳಿಸಿದರು.

ರಘುವಂಶಿ (71; 46ಎ, 4×7, 6×3) ಅವರ ಆಟದ ಬಲದಿಂದ ಕೋಲ್ಕತ್ತ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು 20 ಓವರ್‌ಗಳ ಅಂತ್ಯಕ್ಕೆ 4 ವಿಕೆಟ್‌ಗಳಿಗೆ 192 ರನ್ ಗಳಿಸಿತು. ರಘುವಂಶಿ ಅವರೊಂದಿಗೆ ರಿಂಕು ಸಿಂಗ್ (ಔಟಾಗದೇ 49; 29ಎ, 4×3, 6×2) ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 76 (46ಎ) ರನ್‌ ಕಲೆಹಾಕಿದರು.

ಸಂಜೆ ಮಳೆ ಸುರಿದ ಕಾರಣ ಕ್ರೀಡಾಂಗಣದ ಔಟ್‌ಫೀಲ್ಡ್‌ ಒದ್ದೆಯಾಗಿತ್ತು. ಆದ್ದರಿಂದ ಪಂದ್ಯವು ಸುಮಾರು ಒಂದು ಗಂಟೆ ವಿಳಂಬವಾಗಿ ಆರಂಭವಾಯಿತು. ಆದರೂ, ಯಾವುದೇ ಓವರ್‌ ಕಡಿತವಾಗಲಿಲ್ಲ. ಟಾಸ್ ಗೆದ್ದ ಆರ್‌ಸಿಬಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ವೇಗಿ ಭುವನೇಶ್ವರ್ ಕುಮಾರ್ ಪ್ರಯೋಗಿಸಿದ ಲೆಂಗ್ತ್ ಎಸೆತವನ್ನು ನೇರವಾಗಿ ಆಡಲು ಯತ್ನಿಸಿದ ಫಿನ್ ಅಲೆನ್ (18; 8ಎ, 4X3, 6X1) ಯೋಜನೆ ವಿಫಲವಾಯಿತು. ಬ್ಯಾಟ್‌ ಅಂಚು ಸವರಿದ್ದ ಚೆಂಡು ವಿಕೆಟ್‌ಕೀಪರ್ ಜಿತೇಶ್‌ ಶರ್ಮಾ ಅವರ ಕೈಗವಸುಗಳಲ್ಲಿ ಬಂಧಿಯಾಯಿತು. ಕಳೆದ ಪಂದ್ಯದಲ್ಲಿ ಫಿನ್ ಅವರು ಶತಕ ಬಾರಿಸಿದ್ದರು. ಅವರ ವಿಕೆಟ್ ಪಡೆಯುವ ಮೂಲಕ ಭುವಿ ತಾವು ಪವರ್‌ಪ್ಲೇನಲ್ಲಿ ಪ್ರಭಾವಿ ಎಂಬುದನ್ನು ಮತ್ತೊಮ್ಮೆ ತೋರಿಸಿದರು.

ಇನ್ನೊಂದೆಡೆ ನಾಯಕ ಅಜಿಂಕ್ಯ ರಹಾನೆ (19; 13) ಅವರು ರಘುವಂಶಿಯೊಂದಿಗೆ ದೊಡ್ಡ ಜೊತೆಯಾಟಕ್ಕೆ ಸಜ್ಜಾದಂತೆ ಕಂಡರು. ಆದರೆ; ಆಸ್ಟ್ರೇಲಿಯಾ ವೇಗಿ ಜೋಶ್‌ ಹೇಝಲ್‌ವುಡ್ ತಮ್ಮದೇ ಎಸೆತದಲ್ಲಿ ಅಜಿಂಕ್ಯ ಅವರ ಕ್ಯಾಚ್ ಪಡೆದರು.

ಈ ಹಂತದಲ್ಲಿ ರಘುವಂಶಿ ಅವರೊಂದಿಗೆ ಜೊತೆಗೂಡಿದ ಕ್ಯಾಮೆರಾನ್ ಗ್ರೀನ್ (32; 24ಎ) ಮೂರನೇ ವಿಕೆಟ್ ಜೊತೆಯಾಟದಲ್ಲಿ 68 (46ಎಸೆತ) ರನ್ ಗಳಿಸಿದರು. ಇದರಿಂದಾಗಿ ತಂಡದ ಮೊತ್ತವು ಗಣನೀಯವಾಗಿ ಹೆಚ್ಚಿತು.

13ನೇ ಓವರ್‌ನಲ್ಲಿ ಈ ಜೊತೆಯಾಟಕ್ಕೆ ರಸಿಕ್ ಸಲಾಮ್ ದಾರ್ ಅವರು ತಡೆಯೊಡ್ಡಿದರು. ಗ್ರೀನ್ ಅವರನ್ನು ಕ್ಲೀನ್‌ಬೌಲ್ಡ್ ಮಾಡುವಲ್ಲಿ ರಸಿಕ್ ಯಶಸ್ವಿಯಾದರು. ಆದರೆ ಆರ್‌ಸಿಬಿಯ ಸಂಭ್ರಮ ಹೆಚ್ಚು ಹೊತ್ತು ಉಳಿಯಲು ರಘುವಂಶಿ ಮತ್ತು ರಿಂಕು ಸಿಂಗ್ ಬಿಡಲಿಲ್ಲ. ಉತ್ತಮ ಜೊತೆಯಾಟ ಬೆಳೆಸಿದರು. ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ರನ್‌ ಗಳಿಸುವ ಯತ್ನದಲ್ಲಿ ರಘುವಂಶಿ ರನ್‌ಔಟ್ ಆದರು. ರಿಂಕು ಅಜೇಯರಾಗುಳಿದರು.

Leave a Comment

Your email address will not be published. Required fields are marked *