ಆಭರಣ ಪ್ರೀಯರಿಗೆ ಶಾಕ್ ನೀಡಿದ ಕೇಂದ್ರ| ಚಿನ್ನಾಭರಣಗಳ ಮೇಲೆ ಆಮದು ಸುಂಕ 15% ಏರಿಕೆ

ಸಮಗ್ರ ನ್ಯೂಸ್: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇನ್ನು ಮುಂದೆ ಮತ್ತಷ್ಟು ದುಬಾರಿಯಾಗಲಿವೆ. ಕೇಂದ್ರ ಸರ್ಕಾರವು ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂ ಸೇರಿದಂತೆ ಅಮೂಲ್ಯ ಲೋಹಗಳ ಮೇಲಿನ ಆಮದು ಸುಂಕವನ್ನು ಶೇ.15%ರಷ್ಟು ಹೆಚ್ಚಿಸಿದೆ.

Ad Widget ... ..

ಹಣಕಾಸು ಸಚಿವಾಲಯವು ಮಂಗಳವಾರ ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಪರಿಷ್ಕೃತ ದರಗಳು ಇಂದು ಅಂದರೆ ಮೇ 13, 2026 ರಿಂದಲೇ ಜಾರಿಗೆ ಬರಲಿವೆ.

Ad Widget

ಈ ಹಿಂದೆ ಶೇ. 6ರಷ್ಟಿದ್ದ ಆಮದು ಸುಂಕವನ್ನು ಈಗ ಒಟ್ಟಾರೆಯಾಗಿ ಶೇ. 15ಕ್ಕೆ ಏರಿಸಲಾಗಿದೆ. ಇದರಲ್ಲಿ ಶೇ. 10ರಷ್ಟು ಮೂಲ ಕಸ್ಟಮ್ಸ್ ಸುಂಕ ಮತ್ತು ಶೇ. 5ರಷ್ಟು ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ (AIDC) ಸೇರಿದೆ. ಚಿನ್ನ, ಬೆಳ್ಳಿ, ಪ್ಲಾಟಿನಂ ಮಾತ್ರವಲ್ಲದೆ ಆಭರಣ ತಯಾರಿಕೆಯಲ್ಲಿ ಬಳಸುವ ಕೊಂಡಿಗಳು, ಪಿನ್ಗಳು, ಸ್ಕ್ರೂಗಳಂತಹ ಸಣ್ಣ ಉಪಕರಣಗಳ ಮೇಲಿನ ಸುಂಕವನ್ನೂ ಹೆಚ್ಚಿಸಲಾಗಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಿಂದ ರಿಯಾಯಿತಿ ದರದಲ್ಲಿ ಆಮದಾಗುತ್ತಿದ್ದ ಚಿನ್ನದ ಮೇಲಿನ ಸುಂಕವನ್ನೂ ಸಹ ಸರ್ಕಾರ ಹೆಚ್ಚಿಸಿದೆ.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷಗಳ ಹಿನ್ನೆಲೆಯಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು ಮೇಲೆ ತೀವ್ರ ಒತ್ತಡ ಉಂಟಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು, “ದೇಶದ ಆರ್ಥಿಕ ಹಿತದೃಷ್ಟಿಯಿಂದ ಜನರು ಕನಿಷ್ಠ ಒಂದು ವರ್ಷ ಚಿನ್ನ ಖರೀದಿಸುವುದನ್ನು ತಡೆಹಿಡಿಯಬೇಕು” ಎಂದು ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಭಾರತವು ವಿಶ್ವದಲ್ಲೇ ಚೀನಾದ ನಂತರ ಎರಡನೇ ಅತಿದೊಡ್ಡ ಚಿನ್ನದ ಆಮದುದಾರ ರಾಷ್ಟ್ರವಾಗಿದೆ. ಅಂಕಿಅಂಶಗಳ ಪ್ರಕಾರ 2025-26ರ ಆರ್ಥಿಕ ವರ್ಷದಲ್ಲಿ ಚಿನ್ನದ ಆಮದು ದಾಖಲೆಯ 71.98 ಬಿಲಿಯನ್ ಡಾಲರ್ಗೆ ಏರಿಕೆಯಾಗಿದೆ.

ಸುಂಕ ಏರಿಕೆಯಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಚಿಲ್ಲರೆ ಬೆಲೆಗಳು ಗಣನೀಯವಾಗಿ ಏರಿಕೆಯಾಗಲಿವೆ. ಹಬ್ಬಗಳು ಮತ್ತು ಮದುವೆಯ ಸೀಸನ್ ಆರಂಭವಾಗುತ್ತಿರುವ ಈ ಸಮಯದಲ್ಲಿ, ಆಭರಣ ಖರೀದಿದಾರರಿಗೆ ಈ ನಿರ್ಧಾರ ದೊಡ್ಡ ಹೊರೆಯಾಗಿ ಪರಿಣಮಿಸಲಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಇಂದು ಬಂಗಾರ ಮತ್ತು ಬೆಳ್ಳಿಯ ಬೆಲೆಗಳು ಅಕ್ಷರಶಃ ಗಗನಕ್ಕೇರಿವೆ. ಕೇಂದ್ರ ಸರ್ಕಾರವು ಅಮೂಲ್ಯ ಲೋಹಗಳ ಮೇಲಿನ ಆಮದು ಸುಂಕವನ್ನು ದಿಢೀರ್ ಹೆಚ್ಚಳ ಮಾಡಿದ ಬೆನ್ನಲ್ಲೇ, ಬುಧವಾರದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಶೇಕಡಾ 6ಕ್ಕಿಂತ ಹೆಚ್ಚು ಏರಿಕೆ ಕಂಡು ಹೂಡಿಕೆದಾರರನ್ನು ಬೆರಗುಗೊಳಿಸಿವೆ.

ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್‌ನಲ್ಲಿ (MCX) ಜೂನ್ ಫ್ಯೂಚರ್ಸ್ ಚಿನ್ನದ ಬೆಲೆಯು 10 ಗ್ರಾಂಗೆ ₹1,62,648 ಮಟ್ಟಕ್ಕೆ ತಲುಪುವ ಮೂಲಕ 6% ರಷ್ಟು ‘ಅಪ್ಪರ್ ಸರ್ಕ್ಯೂಟ್’ ದಾಖಲಿಸಿದೆ. ಬೆಳ್ಳಿಯ ಬೆಲೆಯೂ ಸಹ ಭಾರಿ ಜಿಗಿತ ಕಂಡಿದ್ದು, ಪ್ರತಿ ಕೆಜಿಗೆ ₹2,95,805 ರಂತೆ ವಹಿವಾಟು ನಡೆಸುತ್ತಿದೆ.

Leave a Comment

Your email address will not be published. Required fields are marked *