ಸಮಗ್ರ ನ್ಯೂಸ್: ಕರ್ನಾಟಕ ಆಹಾರ ಇಲಾಖೆಯು ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಕೊಳ್ಳಲು ‘ಅನ್ನಸೇವೆ’ ಆ್ಯಪ್ ಸೌಲಭ್ಯವನ್ನು ರಾಜ್ಯದ ಎಲ್ಲಾ 31 ಜಿಲ್ಲೆಗಳಿಗೂ ವಿಸ್ತರಿಸಿದೆ. ಕೇಂದ್ರದ ನಿಯಮದಂತೆ 5 ವರ್ಷಕ್ಕೊಮ್ಮೆ ಇ-ಕೆವೈಸಿ ಕಡ್ಡಾಯವಾಗಿದ್ದು, ಫಲಾನುಭವಿಗಳು ಯಾವುದೇ ದಾಖಲೆಗಳಿಲ್ಲದೆ, ಕೇವಲ ರೇಷನ್ ಕಾರ್ಡ್ ಮತ್ತು ಲಿಂಕ್ ಆಗಿರುವ ಮೊಬೈಲ್ ನಂಬರ್ ಬಳಸಿ ಕುಳಿತಲ್ಲೇ ಕೇವಲ 5 ನಿಮಿಷಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು.
ರೇಷನ್ ಕಾರ್ಡ್ ಫಲಾನುಭವಿಗಳು ಉದ್ಯೋಗಕ್ಕಾಗಿ ನಗರ ಹಾಗೂ ಪಟ್ಟಣಗಳಿಗೆ ವಲಸೆ ಹೋಗುತ್ತಾರೆ. ಇ ಕೆವೈಸಿ ಪೂರ್ಣಗೊಳಿಸಲು ತಮ್ಮ ಕೆಲಸದ ಸ್ಥಳದಿಂದ ಸ್ವಗ್ರಾಮಗಳಿಗೆ ತೆರಳಿ ಕಚೇರಿಗಳಿಗೆ ಭೇಟಿ ನೀಡಬೇಕಾಗುತ್ತಿತ್ತು. ಆದ್ರೆ, ಇದೀಗ ‘ಅನ್ನ ಸೇವೆ’ ಆಪ್ನಿಂದ ಈ ತೊಂದರೆ ತಪ್ಪಲಿದೆ.
ಮೊಬೈಲ್ನಲ್ಲೇ ಇ ಕೆವೈಸಿ ಮಾಡುವ ವಿಧಾನ ಹೀಗಿದೆ
ಅನ್ನ ಸೇವೆ ಆಪ್ ತೆರೆದ ಕೂಡಲೇ ಲಾಗಿನ್ ಪ್ರಕಾರವನ್ನು ಆಯ್ಕೆ ಮಾಡಬೇಕು. ಸ್ವಯಂ/ ನಾಗರಿಕ ಅಥವಾ ಅಧಿಕಾರಿ ಎಂಬ ಆಯ್ಕೆ ಇರುತ್ತದೆ. ಸ್ವಯಂ/ನಾಗರಿಕ ಆಯ್ಕೆ ಮಾಡಿಕೊಳ್ಳಬೇಕು.
ಕೆಳಗಡೆ ಜಿಲ್ಲೆಗಳ ಪಟ್ಟಿ ಲಭ್ಯವಿದ್ದು ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು.
ಆನಂತರ ಪಡಿತರ ಚೀಟಿ ಸಂಖ್ಯೆ (ರೇಷನ್ ಕಾರ್ಡ್ ನಂಬರ್) ಹಾಕಬೇಕು.
ಅದರ ಕೆಳಭಾಗದಲ್ಲಿ ರೇಷನ್ ಕಾರ್ಡ್ಗೆ ಲಿಂಕ್ ಆದ ಮೊಬೈಲ್ ನಂಬರ್ ಹಾಕಿ ಓಟಿಪಿ ಪಡೆಯಬೇಕು.
ಓಟಿಪಿ ಹಾಕಿದ ಕೂಡಲೇ ಹೊಸ ಪೇಜ್ ತೆರೆದುಕೊಂಡು ಕುಟುಂಬ ಸದಸ್ಯರು ವಿವರ ಲಭ್ಯವಾಗುತ್ತದೆ.
ಕುಟುಂಬ ಸದಸ್ಯರ ಪೈಕಿ ಯಾರದ್ದು ಇ ಕೆವೈಸಿ ಮಾಡಬೇಕು ಅವರನ್ನು ಆಯ್ಕೆ ಮಾಡಿದರೆ ಸಹಾಯಕ ಆಪ್ಗಳ ಮೂಲಕ ಫೇಸ್ರೀಡ್ ಮಾಡಬೇಕು.
ಕೊನೆಗೆ ಇ ಕೆವೈಸಿ ಯಶಸ್ವಿ ಎಂಬ ಸಂದೇಶ ಬರುತ್ತದೆ. ಆಗ ನಿಮ್ಮ ಇ ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಂತೆ.
ಮೊಬೈಲ್ನಲ್ಲೇ ಅನ್ನ ಸೇವೆ ಆ್ಯಪ್ ಮೂಲಕ ಇ-ಕೈವೈಸಿ ಹೇಗೆ ಮಾಡಿಕೊಳ್ಳಬೇಕು ಎನ್ನುವುದನ್ನು ಆಹಾರ ಸಚಿವ ರಿಜ್ವಾನ್ ಅರ್ಷದ್ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಗ್ರಾಹಕರ e-KYC ಪ್ರಕ್ರಿಯೆಯನ್ನು ಇನ್ನಷ್ಟು ಸರಳ, ವೇಗ ಹಾಗೂ ತೊಂದರೆರಹಿತವಾಗಿಸಲು ‘ಅನ್ನ ಸೇವೆ ಆ್ಯಪ್’ ಅನ್ನು ಪರಿಚಯಿಸಲಾಗಿದೆ. ಇನ್ನು ಮುಂದೆ ನ್ಯಾಯಬೆಲೆ ಅಂಗಡಿಗೆ ತೆರಳಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಮನೆಯಲ್ಲೇ ಕುಳಿತು ಸುಲಭವಾಗಿ e-KYC ಪೂರ್ಣಗೊಳಿಸಬಹುದು.
ಹಿರಿಯ ನಾಗರಿಕರು ಹಾಗೂ ಮಕ್ಕಳ ಅನುಕೂಲಕ್ಕಾಗಿ Face Authentication ಸೌಲಭ್ಯವೂ ಲಭ್ಯವಿದೆ. ಜನರ ಅಮೂಲ್ಯ ಸಮಯ ಮತ್ತು ಶ್ರಮವನ್ನು ಉಳಿಸುವ ಉದ್ದೇಶದಿಂದ ಈ ಡಿಜಿಟಲ್ ಸೇವೆಯನ್ನು ಜಾರಿಗೊಳಿಸಲಾಗಿದೆ. ಅನ್ನ ಸೇವೆ ಆ್ಯಪ್ ಮೂಲಕ e-KYC ಪೂರ್ಣಗೊಳಿಸುವ ಸರಳ ಹಂತಗಳನ್ನು ತಿಳಿಯಲು ಈ ವಿಡಿಯೋ ವೀಕ್ಷಿಸಿ. ಸೂಚನೆಗಳನ್ನು ಪಾಲಿಸಿ, Face Authentication ಪೂರ್ಣಗೊಳಿಸಿ, ಮನೆಯಲ್ಲೇ ಸುಲಭವಾಗಿ e-KYC ಮುಗಿಸಿ ಎಂದು ತಿಳಿಸಿದ್ದಾರೆ.









