ಸಮಗ್ರ ನ್ಯೂಸ್: ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಧಾರವಾಡ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನ ಈಗಾಗಲೇ ತಾಂತ್ರಿಕವಾಗಿ ರದ್ದಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಸಭಾಧ್ಯಕ್ಷರ ಪಾತ್ರ ಮತ್ತು ನಿಯಮಗಳ ಕುರಿತು ಎದ್ದಿರುವ ಗೊಂದಲಗಳಿಗೆ ತೆರೆ ಎಳೆದರು.
“ಯಾವುದೇ ಒಬ್ಬ ಜನಪ್ರತಿನಿಧಿಯು ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾದ ತಕ್ಷಣ, ನಿಯಮಗಳ ಪ್ರಕಾರ ಅವರ ಶಾಸಕ ಸ್ಥಾನ ತಾನಾಗಿಯೇ ರದ್ದಾಗುತ್ತದೆ. ಇದನ್ನು ರದ್ದು ಮಾಡುವ ವಿಶೇಷ ಅಧಿಕಾರ ಸಭಾಧ್ಯಕ್ಷರಿಗಿಲ್ಲ. ಒಂದು ವೇಳೆ ನ್ಯಾಯಾಲಯವು ಈ ಶಿಕ್ಷೆಗೆ ತಡೆಯಾಜ್ಞೆ ನೀಡಿದರೆ ಮಾತ್ರ ಅವರ ಸದಸ್ಯತ್ವ ಮರುಸ್ಥಾಪನೆಯಾಗುತ್ತದೆ,” ಎಂದು ಯು.ಟಿ. ಖಾದರ್ ವಿವರಿಸಿದರು.
ಶಾಸಕರನ್ನು ಅನರ್ಹಗೊಳಿಸುವ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪವನ್ನು ಸಭಾಧ್ಯಕ್ಷರು ತಳ್ಳಿಹಾಕಿದರು. “ಅನರ್ಹತೆ ವಿಚಾರದಲ್ಲಿ ಪಕ್ಷಪಾತ ಮಾಡುವ ಪ್ರಶ್ನೆಯೇ ಇಲ್ಲ. ಶಾಸಕ ಸ್ಥಾನ ರದ್ದಾದ ಮೇಲೆ ಅವರು ಸದನಕ್ಕೆ ಬರಲು ಸಾಧ್ಯವಿಲ್ಲ. ಈ ಕಾನೂನು ಅರಿವಿಲ್ಲದವರಿಗೆ ನಾನು ಮಾಹಿತಿ ನೀಡುತ್ತಿದ್ದೇನೆ ಅಷ್ಟೇ,” ಎಂದು ಅವರು ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದರು.







