ಅಡಿಕೆ ಎಲೆ ಚುಕ್ಕಿ ರೋಗದ ಹತೋಟಿ ಪ್ರಾತ್ಯಕ್ಷಿಕೆ| ಗುತ್ತಿಗಾರಿನಲ್ಲಿ ಮಾಹಿತಿ ಪಡೆದುಕೊಂಡ ಸಂಸದ ಚೌಟ

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರದ ಮಿಷನ್ ಫಾರ್ ಇಂಟೆಗ್ರೇಟೆಡ್ ಡೆವಲಪ್ಮೆಂಟ್ ಆಫ್ ಹಾರ್ಟಿಕಲ್ಚರ್ ಯೋಜನೆಯಡಿ ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ ನೇತೃತ್ವದಲ್ಲಿ ದಕ್ಷಿಣ ಕನ್ನಡದಲ್ಲಿ ವ್ಯಾಪಕವಾಗಿರುವ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಸುಳ್ಯದ ಗುತ್ತಿಗಾರಿನಲ್ಲಿ ಅಳವಡಿಸಿರುವ ವಿಶೇಷ ಪ್ರಾತ್ಯಕ್ಷಿಕೆ ಕುರಿತಂತೆ ಬುಧವಾರ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಅಡಿಕೆ ಬೆಳೆಗಾರರ ತೋಟಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

. Ad Widget . Ad Widget . Ad Widget

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಬೆಳೆಗೆ ಬಾಧಿಸಿರುವ ಎಲೆ ಚುಕ್ಕೆ ರೋಗವನ್ನು ಗಂಭೀರವಾಗಿ ಪರಿಗಣಿಸಿರುವ ಸಂಸದ ಕ್ಯಾ. ಚೌಟ ಅವರು ಶಾಶ್ವತ ಹಾಗೂ ವೈಜ್ಞಾನಿಕವಾದ ಪರಿಹಾರ ಮಾರ್ಗಗಳನ್ನು ಅಳವಡಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಚನಿಲದಲ್ಲಿರುವ ಸುಬ್ರಹ್ಮಣ್ಯ ಪ್ರಸಾದ್ ಹಾಗೂ ಸುತ್ತಲಿನ ಅಡಿಕೆ ಬೆಳೆಗಾರರ ತೋಟಕ್ಕೆ ಸಿಪಿಸಿಆರ್‌ಐ ಕಾಸರಗೋಡು ನಿರ್ದೇಶಕರಾದ ಡಾ. ಬಾಲಚಂದ್ರ ಹೆಬ್ಬಾರ್ , ಕ್ಯಾಂಪ್ಕೋ ಅಧ್ಯಕ್ಷರಾದ ಸತೀಶ್‌ಚಂದ್ರ ಹಾಗೂ ಕೃಷಿ ವಿಜ್ಞಾನಿಗಳ ಜತೆ ಭೇಟಿ ನೀಡಿದ ಸಂಸದರು, ಅಲ್ಲಿ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಅಳವಡಿಸಿರುವ ಪೋಷಕಾಂಶ ಮತ್ತು ವೈಜ್ಞಾನಿಕ ವಿಧಾನ ಆಧಾರಿತ ಪ್ರಾತ್ಯಕ್ಷಿಕೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆದರು.

. Ad Widget .

ಜಿಲ್ಲೆಯಲ್ಲಿ ಅಡಿಕೆ ಬೆಳೆಗಾರರನ್ನು ಈ ಎಲೆಚುಕ್ಕಿ ರೋಗದಿಂದ ರಕ್ಷಿಸುವುದಕ್ಕೆ ಕ್ಯಾ. ಚೌಟ ಅವರು ವೈಜ್ಞಾನಿಕ ಪರಿಹಾರೋಪಾಯಗಳ ಕಡೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಅದರಂತೆ ಸುಳ್ಯದ ಗುತ್ತಿಗಾರು ಗ್ರಾಮದಲ್ಲಿ ಸುಬ್ರಹ್ಮಣ್ಯ ಪ್ರಸಾದ್ ಅವರ ಒಂದೂವರೆ ಎಕರೆ ಸೇರಿದಂತೆ ಸುತ್ತಲಿನ ಅಡಿಕೆ ಕೃಷಿಕರ ಒಟ್ಟು 6 ಎಕರೆಯಲ್ಲಿ ಪ್ರಾಯೋಗಿಕವಾಗಿ ಎಲೆಚುಕ್ಕಿ ರೋಗ ತಡೆಯಲು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ವಿಟ್ಲ ಪ್ರಾಂತೀಯ ಕ್ಷೇತ್ರದ ಮಾರ್ಗದರ್ಶನದಲ್ಲಿ ಪೋಷಕಾಂಶ ಮತ್ತು ವೈಜ್ಞಾನಿಕ ವಿಧಾನಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಕಳೆದ ಜೂನ್‌ನಿಂದ ಇವರೆಲ್ಲರ ತೋಟದಲ್ಲಿ ವೈಜ್ಞಾನಿಕ ಕ್ರಮಗಳನ್ನು ಕೈಗೊಂಡು ಅಡಿಕೆ ಬೆಳೆಗೆ ಬಾಧಿಸುವ ಎಲೆಚುಕ್ಕಿ ರೋಗದ ಬಗ್ಗೆ ಕಾಲ-ಕಾಲಕ್ಕೆ ಹೆಚ್ಚಿನ ನಿಗಾ, ಅಗತ್ಯ ಮಾಹಿತಿ ಸಂಗ್ರಹಿಸಿ ಪ್ರಾತ್ಯಕ್ಷೆಗಳ ಮೂಲಕ ಪೂರಕ ಅಧ್ಯಯನ ನಡೆಸಲಾಗುತ್ತಿದೆ. ಜತೆಗೆ, ಕೃಷಿಕರಿಗೂ ಈ ಎಲೆಚುಕ್ಕಿ ರೋಗ ತಡೆಯಲು ಅಡಿಕೆ ತೋಟದಲ್ಲಿ ಏನೆಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಕಾಲ-ಕಾಲಕ್ಕೆ ಕೃಷಿ ವಿಜ್ಞಾನಿಗಳು ಭೇಟಿ ನೀಡಿ ಮಾರ್ಗದರ್ಶನ ನೀಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಸಿಪಿಸಿಆರ್‌ಐ ವಿಟ್ಲದ ರಾಜೇಶ್, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ, ಮುಖಂಡರಾದ ವೆಂಕಟ್ ದಂಬೆಕೋಡಿ, ಕೇಶವ ಭಟ್ ಮುಳಿಯ, ಗುತ್ತಿಗಾರು ಸಹಕಾರಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಮೊಗ್ರ ಮೊದಲಾದವರಿದ್ದರು.

Leave a Comment

Your email address will not be published. Required fields are marked *