ಸಮಗ್ರ ನ್ಯೂಸ್: 2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಬುಧವಾರ (ಏಪ್ರಿಲ್ 23) ಶಿಕ್ಷಣ ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟವಾಗಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧಿಕೃತ ಪೋರ್ಟಲ್ https://karresults.nic.in ಮೂಲಕವೂ ಫಲಿತಾಂಶ ವೀಕ್ಷಿಸಬಹುದಾಗಿದೆ. ಹಾಗೇಯೇ ‘KarnatakaOne’ ಮೊಬೈಲ್ ಆ್ಯಪ್ ಮೂಲಕವೂ ಫಲಿತಾಂಶ ಪರಿಶೀಲಿಸಿಕೊಳ್ಳಬಹುದು.
ಈ ಬಾರಿಯ ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇ.94.1ರಷ್ಟು ಮಂದಿ ಪಾಸಾಗಿದ್ದಾರೆ. ಏಳು ಮಂದಿ ವಿದ್ಯಾರ್ಥಿಗಳು 625 ಅಂಕಗಳನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಮೊಬೈಲ್ ಸಂಖ್ಯೆಗೆ ಮಂಡಳಿ ವತಿಯಿಂದಲೇ ನೇರವಾಗಿ ಫಲಿತಾಂಶದ ವಿವರಗಳು ಎಸ್‌ಎಂಎಸ್ ಅಥವಾ ವಾಟ್ಸಾಪ್ ಮೂಲಕ ರವಾನೆಯಾಗುತ್ತಿದೆ.
ಪರೀಕ್ಷೆ ಬರೆದಿದ್ದ 7,70,209 ಮಕ್ಕಳ ಪೈಕಿ 7,24,794 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಆ ಮೂಲಕ ಎಸ್ಎಸ್ಎಲ್ಸಿಯಲ್ಲಿ ಶೇ.94.1 ಮಂದಿ ಪಾಸ್ ಆಗಿದ್ದಾರೆ. ಮಾರ್ಚ್ 18ರಿಂದ ಏಪ್ರಿಲ್ 2ರವರೆಗೂ ಒಟ್ಟು 2,870 ಪರೀಕ್ಷಾ ಕೇಂದ್ರಗಳಲ್ಲಿ SSLC ಪರೀಕ್ಷೆ ನಡೆದಿತ್ತು.
ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 98.40 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ಶೇ. 98.18 ಫಲಿತಾಂಶ ಪಡೆದ ಉಡುಪಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಶೇ.85.06 ಫಲಿತಾಂಶದೊಂದಿಗೆ ಕಲಬುರಗಿಜಿಲ್ಲೆ ಕೊನೆಯ ಸ್ಥಾನದಲ್ಲಿದೆ.







