ಸಮಗ್ರ ನ್ಯೂಸ್: ದೀರ್ಘಕಾಲದ ತೀವ್ರ ಕೊರತೆಯ ದುರ್ಬಲ ಮುಂಗಾರಿನ ಬಳಿಕ ಬೆಂಗಳೂರು ನಗರಕ್ಕೆ ಹಿಂಗಾರು ಮಳೆಯು ಅಧಿಕೃತವಾಗಿ ಪ್ರವೇಶಿಸಿದ್ದು, ಅಕ್ಟೋಬರ್ 18ರವರೆಗೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಹಿಂಗಾರು ಮಳೆಗೆ ಪೂರಕವಾದ ವಾತಾವರಣವನ್ನು ಕಲ್ಪಿಸಿದೆ. ಇದರ ಪ್ರಭಾವದಿಂದಾಗಿ ಮುಂಬರುವ ಮೂರು ದಿನಗಳ ಕಾಲ ನಗರದಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಅಲ್ಲದೆ, ಆಗಾಗ ಜೋರು ಮಳೆಯೂ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬುಧವಾರವೇ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದ ಕೆಲವೆಡೆ ಹಗುರವಾದ ಮಳೆ ಸುರಿದಿದ್ದು ಮಳೆಯ ಆಗಮನದ ಮುನ್ಸೂಚನೆ ನೀಡಿದೆ. ಈ ಮಳೆಯ ಪರಿಣಾಮವಾಗಿ ನಗರದ ತಾಪಮಾನದಲ್ಲಿ ಸ್ವಲ್ಪ ಇಳಿಕೆಯಾಗಲಿದ್ದು, ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ವರೆಗೆ ಇರಲಿದೆ ಎಂದು ಅಂದಾಜು ಮಾಡಲಾಗಿದೆ. ಈಗಾಗಲೇ ತಮಿಳುನಾಡು ಮತ್ತು ಆಂಧ್ರಪ್ರದೇಶದ ವಿವಿಧೆಡೆ ಹಿಂಗಾರು ಮಳೆ ಆರಂಭವಾಗಿದ್ದು, ಗುರುವಾರದಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲೂ ಮಳೆಯ ಅಬ್ಬರ ಹೆಚ್ಚಾಗುವ ಸಂಭವವಿದೆ.
ಅಕ್ಟೋಬರ್ 15 ರಿಂದ 22ರವರೆಗಿನ ಅವಧಿಯಲ್ಲಿ ಮಳೆಯಾಗುವ ಸಾಧ್ಯತೆಗಳಿದ್ದರೂ ಸಹ, ಈ ಬಾರಿ ಒಟ್ಟಾರೆಯಾಗಿ ಹಿಂಗಾರು ಮಳೆಯು ಶೇಕಡಾ 30ರಷ್ಟು ಕೊರತೆಯಾಗಲಿದೆ ಎಂದು ಹವಾಮಾನ ಇಲಾಖೆ ಮುಂಚಿತವಾಗಿ ಎಚ್ಚರಿಕೆ ನೀಡಿದೆ.









