ಸಮಗ್ರ ನ್ಯೂಸ್: ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪವಿತ್ರ ಜಾತ್ರೋತ್ಸವದ ಧ್ವಜಾರೋಹಣ ಪ್ರಕ್ರಿಯೆಯಲ್ಲಿ ಯಾವುದೇ ಅಧಿಕೃತ ಅರ್ಹತೆ ಇಲ್ಲದ ಪಿ.ಜಿ. ಜಗನ್ನಿವಾಸ ರಾವ್ ಅವರು ಭಾಗವಹಿಸುವುದು ದೇವಸ್ಥಾನದ ಇತಿಹಾಸಕ್ಕೆ ಕಪ್ಪುಚುಕ್ಕೆಯಾಗಲಿದೆ ಎಂದು ಶೈವಕ್ಷೇತ್ರ ಸಂರಕ್ಷಣಾ ವೇದಿಕೆಯ ಸಂಸ್ಥಾಪಕ ಶ್ರೀನಾಥ್ ಟಿ.ಎಸ್. ಸುಬ್ರಹ್ಮಣ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನದ ಪಾವಿತ್ರ್ಯತೆ ಮತ್ತು ಸಂಪ್ರದಾಯಗಳ ಉಲ್ಲಂಘನೆಯಾಗುತ್ತಿರುವ ಕುರಿತು ಹಲವು ಗಂಭೀರ ಆರೋಪಗಳನ್ನು ಮಾಡಿದರು. “ದೇವಸ್ಥಾನದ ನಿಯಮದಂತೆ ಧ್ವಜಾರೋಹಣ ಮತ್ತು ಅವರೋಹಣ ಮಾಡುವ ಜವಾಬ್ದಾರಿ ಕೇವಲ ಖಾಯಂ ಪದಾರ್ಥಿ ನೌಕರರಿಗೆ ಮಾತ್ರ ಇರುತ್ತದೆ. ಪ್ರಸ್ತುತ ನಾಗೇಶ್ ಮತ್ತು ಬಾಲಕೃಷ್ಣ ಅವರು ಈ ಹುದ್ದೆಯಲ್ಲಿದ್ದಾರೆ.
ಆದರೆ, ಯಾವುದೇ ನೇಮಕಾತಿ ಅಥವಾ ಅನುವಂಶಿಕ ಹಕ್ಕು ಇಲ್ಲದ ಪಿ.ಜಿ. ಜಗನ್ನಿವಾಸ ರಾವ್ ಅವರು ಅಕ್ರಮವಾಗಿ ಧ್ವಜಾರೋಹಣ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಅವರ ಕುಟುಂಬದ ಸದಸ್ಯರು ಗರ್ಭಗುಡಿಯ ಎಡನಾಳಿಗೆ ಅನಧಿಕೃತವಾಗಿ ಪ್ರವೇಶಿಸುತ್ತಿದ್ದಾರೆ” ಎಂದು ಅವರು ಆಪಾದಿಸಿದರು.
ಕಳೆದ ವರ್ಷದ ಜಾತ್ರೆಯ ಸಂದರ್ಭದಲ್ಲಿ ಜಗನ್ನಿವಾಸ ರಾವ್ ಅವರು ಅರ್ಹತೆ ಇಲ್ಲದಿದ್ದರೂ ಬ್ರಹ್ಮರಥ ಏರಿ ನಿಂತಿದ್ದರು ಮತ್ತು ಅವಭೃತ ಸ್ನಾನದ ವೇಳೆ ದೇವರ ಅತೀ ಸಮೀಪಕ್ಕೆ ಹೋಗಿ ಪಾವಿತ್ರ್ಯತೆಗೆ ಭಂಗ ತಂದಿದ್ದಾರೆ ಎಂದು ಶ್ರೀನಾಥ್ ದೂರಿದರು. ಜಗನ್ನಿವಾಸ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣವಿದೆ. ಸಹಪಾಠಿ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ವಚನಭ್ರಷ್ಟರಾಗಿ ಮೋಸ ಮಾಡಿದ ಆರೋಪ ಇವರ ಮೇಲಿದೆ. ಇಂತಹ ಹಿನ್ನೆಲೆಯುಳ್ಳ ವ್ಯಕ್ತಿಗಳು ದೇವಸ್ಥಾನದ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸುವುದು ಭಕ್ತಾದಿಗಳ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅವರು ಹೇಳಿದರು.ದೇವಸ್ಥಾನದ ಘನತೆ ಮತ್ತು ಶುದ್ಧಾಚಾರಗಳನ್ನು ಕಾಪಾಡಲು ಆಡಳಿತ ಮಂಡಳಿ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಸಂಪ್ರದಾಯದ ವಿರುದ್ಧವಾಗಿ ನಡೆಯುತ್ತಿರುವ ಹಸ್ತಕ್ಷೇಪವನ್ನು ತಡೆಗಟ್ಟಬೇಕು ಎಂದು ವೇದಿಕೆಯು ಒತ್ತಾಯಿಸಿದೆ.






