ಲಾಕ್ ಡೌನ್ ಲಾಕಪ್ ಡೆತ್ ಪ್ರಕರಣ| 9 ಮಂದಿ ಪೊಲೀಸ್ ಅಧಿಕಾರಿಗಳಿಗೆ ಗಲ್ಲು ವಿಧಿಸಲು ಕಾರಣಳಾದ ಸಹೋದ್ಯೋಗಿ| ಯಾರು ಗೊತ್ತಾ ಈ ರೇವತಿ?

ಸಮಗ್ರ ನ್ಯೂಸ್: 2020ರಲ್ಲಿ ಕೋವಿಡ್​-19 ಲಾಕ್​ಡೌನ್ ಸಮಯದಲ್ಲಿ ನಡೆದ ಇಬ್ಬರ ಲಾಕಪ್​ ಡೆತ್​ ಕೇಸ್​ನಲ್ಲಿ 9 ಪೊಲೀಸ್​ ಅಧಿಕಾರಿಗಳಿಗೆ ಕಡೆಗೂ ಮಧುರೈ ಕೋರ್ಟ್ ಗಲ್ಲು ಶಿಕ್ಷೆ ತೀರ್ಪು ಘೋಷಿಸಿದೆ. 6 ವರ್ಷಗಳಿಂದ ಬಂಧನದಲ್ಲಿದ್ದ ಆರೋಪಿ ಖಾಕಿಗಳ ವಿರುದ್ಧ ನ್ಯಾಯಾಲಯ ನೀಡಿದ ಐತಿಹಾಸಿಕ ತೀರ್ಪಿಗೆ ಸದ್ಯ ದೇಶದ ಜನತೆ ತಲೆಬಾಗಿದ್ದಾರೆ.

Ad Widget ... ..

ಈ ಸಂದರ್ಭದಲ್ಲಿ, ಅಮಾಯಕರ ಜೀವವನ್ನು ಬಲಿ ಪಡೆದ ಪೊಲೀಸ್​ ಅಧಿಕಾರಿಗಳ ವಿರುದ್ಧ ದಿಟ್ಟತನದಿಂದ ಸಾಕ್ಷಿ ಹೇಳಿದ ಓರ್ವ ಸಾಮಾನ್ಯ ಮಹಿಳಾ ಕಾನ್​ಸ್ಟೇಬಲ್​ಗೆ ಸಲಾಂ ರೇವತಿ ಎಂಬ ಕೂಗುಗಳು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ​
ಸಂತಾನಕುಲಂನಲ್ಲಿ ಜೈರಾಜ್ ಮತ್ತು ಬೆನ್ನಿಕ್ಸ್ ಎಂಬ ತಂದೆ-ಮಗನನ್ನು ಕೋವಿಡ್​ ನಿಯಮ ಉಲ್ಲಂಘಿಸಿದ್ದಾರೆ ಎಂದು ಕಸ್ಟಡಿಗೆ ಪಡೆದ ಪೊಲೀಸ್​ ಅಧಿಕಾರಿಗಳು, ತಮ್ಮ ಮಾತಿಗೆ ತಿರುಗೇಳಿದರು ಎಂಬ ಕ್ಷುಲಕ ಕಾರಣಕ್ಕೆ, ಜೈಲಿನೊಳಗೆ ಕಟ್ಟಿಹಾಕಿ, ಮನಬಂದಂತೆ ಥಳಿಸಿದ್ದಲ್ಲದೇ, ಕೋಲು, ಕಬ್ಬಿಣದ ರಾಡ್​ಗಳಿಂದ ಚಿತ್ರಹಿಂಸೆ ನೀಡಿ, ಅವರ ಕೊಲೆಗೆ ಕಾರಣರಾದರು. ಕಸ್ಟಡಿ ಡೆತ್​​ ಪ್ರಕರಣವನ್ನು ಮಾಧ್ಯಮಗಳಿಂದ ಮತ್ತು ಜನರಿಂದ ಮುಚ್ಚಿಹಾಕಲು ಪಣತೊಟ್ಟಿದ್ದ 9 ಆರೋಪಿ ಪೊಲೀಸರಿಗೆ ಇದೀಗ ಮರಣದಂಡನೆ ವಿಧಿಸಿದ ಐತಿಹಾಸಿಕ ತೀರ್ಪನ್ನು ಇಡೀ ದೇಶ ಸಂಭ್ರಮಿಸುತ್ತಿರುವಾಗ, ಯಾವ ಮೇಲಾಧಿಕಾರಿಗೂ ಹೆದರದೆ, ದಿಟ್ಟತನದಿಂದ ಸಾಕ್ಷಿ, ಸತ್ಯಾಂಶ ಬಾಯ್ಬಿಟ್ಟ ರೇವತಿಯ ಬಗ್ಗೆ ನಾವಿಲ್ಲಿ ತಿಳಿಯಲೇಬೇಕು.

Ad Widget

2020ರಲ್ಲಿ ಈ ಭೀಕರ ಘಟನೆ ನಡೆದಾಗ ರೇವತಿ, ಸಂತಾನಕುಲಂ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಕಾರ್ಯನಿರ್ವಹಿಸುತ್ತಿದ್ದರು. ಈ ದೌರ್ಜನ್ಯದಲ್ಲಿ ಭಾಗಿಯಾಗಿದ್ದ ಪೊಲೀಸರೆಲ್ಲರೂ ಪ್ರಭಾವಿ ವ್ಯಕ್ತಿಗಳೇ ಆಗಿದ್ದರು. ಆದರೆ, ರೇವತಿ ಮಾತ್ರ ತೀರ ಸಾಮಾನ್ಯ ಹಾಗೂ ಚಿಕ್ಕ ವಯಸ್ಸಿನ ಮಹಿಳಾ ಕಾನ್‌ಸ್ಟೆಬಲ್ ಆಗಿದ್ದರು. ಇಷ್ಟಾದರೂ ಕಾನೂನಿನ ಕಣ್ಣಿಗೆ ಮಣ್ಣೆರೆಚಲು ಮುಂದಾದ ತಪ್ಪಿತಸ್ಥರ ವಿರುದ್ಧ ಕೊಲೆ ಘಟನೆಯ ಇಂಚಿಂಚೂ ಸಾಕ್ಷಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಈ ಪ್ರಕರಣವನ್ನು ಆರಂಭದಲ್ಲಿ ತನಿಖೆ ಮಾಡಿದ ಮ್ಯಾಜಿಸ್ಟ್ರೇಟ್ ಭಾರತಿದಾಸನ್, ಸಂತಾನಕುಲಂ ಪೊಲೀಸ್ ಠಾಣೆಗೆ ಬಂದಾಗ ಕಾನ್‌ಸ್ಟೆಬಲ್ ರೇವತಿ ಪ್ರಕರಣವನ್ನು ಬಿಚ್ಚಿಡಲು ಸಹಾಯ ಮಾಡಿದರು. ಕೇಸ್​ಗೆ ಸಹಾಯಹಸ್ತ ನೀಡುವ ಮುನ್ನ ಅವರು ಕೇಳಿದ್ದು ಇಷ್ಟೇ. “ಸರ್, ನಾನು ನಿಮಗೆ ಎಲ್ಲವನ್ನೂ, ಪ್ರತಿಯೊಂದು ವಿವರವನ್ನು, ಮುಚ್ಚಿಟ್ಟಿರುವ ಸತ್ಯವನ್ನು ಪೂರ್ತಿಯಾಗಿ ಹೇಳುತ್ತೇನೆ. ಆದರೆ, ನಾನು ಇಬ್ಬರು ಪುಟ್ಟ ಹೆಣ್ಣುಮಕ್ಕಳ ತಾಯಿ. ನನ್ನ ಮಕ್ಕಳ ಸುರಕ್ಷತೆ ಮತ್ತು ಕೆಲಸದ ಸುರಕ್ಷತೆಯನ್ನು ನೀವು ಖಾತರಿಪಡಿಸಬಹುದೇ?” ಎಂದು ಮ್ಯಾಜಿಸ್ಟ್ರೇಟ್ ಬಳಿ ಕೇಳಿಕೊಂಡರು.

ಘಟನೆ ನಡೆಯುವ ದಿನ ರೇವತಿ ಅವರು ನೈಟ್​ಶಿಫ್ಟ್​ನಲ್ಲಿದ್ದರು. ಜಯರಾಜ್ ಮತ್ತು ಬೆನ್ನಿಕ್ಸ್ ಮೇಲೆ ನಡೆದ ಕ್ರೌರ್ಯವನ್ನು ತಮ್ಮ ಕಣ್ಣಾರೆ ಕಂಡಿದ್ದಾಗಿ ಹೇಳಿಕೊಂಡಿದ್ದಾರೆ. ಎಸ್‌ಐ ಬಾಲಕೃಷ್ಣನ್, ಇನ್ಸ್‌ಪೆಕ್ಟರ್ ಶ್ರೀಧರ್ ಮತ್ತು ಎಸ್‌ಐ ರಗುಕನೆಸ್ ಅವರು ಕೈಗೆ ಸಿಕ್ಕ ವಸ್ತುಗಳಿಂದ ತಂದೆ ಮತ್ತು ಮಗನಿಗೆ ಹೊಡೆಯುತ್ತಿದ್ದರು. ಮತ್ತು ತಮ್ಮ ಬೂಟುಗಳಿಂದ ಅವರ ಖಾಸಗಿ ಭಾಗಗಳನ್ನು ತುಳಿದಿದ್ದರು ಎಂದು ವಿವರಿಸಿದ್ದಾಗಿ ವರದಿಯಾಗಿದೆ.

ಮೃತ ತಂದೆ-ಮಗ ನೋವಿನಿಂದ ನರಳಾಡುತ್ತಿರುವಾಗ ಅಧಿಕಾರಿಗಳು ಮದ್ಯ ಕುಡಿಯಲು ಆಗಾಗ್ಗೆ ವಿರಾಮ ತೆಗೆದುಕೊಳ್ಳುತ್ತಿದ್ದರು. ಈ ಸಮಯದಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿದ್ದವರಿಗೆ ನೀರು ಕೊಡುತ್ತಿದ್ದೆ. ಜಯರಾಜ್‌ಗೆ ಏನಾದರೂ ಬೇಕಾ ಎಂದು ಕೇಳಿ, ಬಳಿಕ ಕಾಫಿ ಕೊಟ್ಟಿದ್ದರು. ಆದರೆ, ಖಾಕಿಗಳು ಅದನ್ನು ಚೆಲ್ಲಿದ್ದಾಗಿ ಹೇಳಲಾಗಿದೆ. ಈ ಕ್ರೌರ್ಯವನ್ನು ಕಣ್ಣಾರೆ ಸಹಿಸಲಾಗದ ಮಹಿಳಾ ಕಾನ್​ಸ್ಟೇಬಲ್​ ಸುಮ್ಮನೆ ನಿಂತಿದ್ದರು.

ಇದಾದ ಬಳಿಕ ಬೆನ್ನಿಕ್ಸ್‌ನನ್ನು ಬೆತ್ತಲೆಯಾಗಿಸಿ, ಅವನ ಕೈ ಕಾಲುಗಳನ್ನು ಪ್ರತ್ಯೇಕವಾಗಿ ಕಟ್ಟಿ, ತಮ್ಮ ಬಳಿಯಿದ್ದ ಪೈಪು, ರಾಡ್​ನಿಂದ ಹೊಡೆದಿದ್ದಾರೆ. ಅವರು ಜಯರಾಜ್‌ಗೂ ಅದೇ ರೀತಿ ಮಾಡಿದರು. ಇಬ್ಬರ ಕಿರುಚಾಟದ ನೋವನ್ನು ಸಹಿಸಲಾಗದೆ ರೇವತಿ ಸ್ಥಳದಿಂದ ಠಾಣೆಯಿಂದ ಹೊರನಡೆದಿದ್ದಾರೆ. ತನ್ನದೇ ಠಾಣೆಯ ಪೊಲೀಸರು ಸತ್ಯ, ಸಾಕ್ಷಿಗಳ ಬಗ್ಗೆ ಬಾಯ್ಬಿಡದಂತೆ ಬೆದರಿಕೆಯಿಟ್ಟರೂ ಸಹ ಅದ್ಯಾವುದಕ್ಕೂ ಬಗ್ಗದೆ ಇಂದು ಆರೋಪಿಗಳ ವಿರುದ್ಧ ಏಕಾಂಗಿ ಸಾಕ್ಷಿಯಾಗಿ ರೇವತಿ ನಿಂತದ್ದು ಸತ್ಯಕ್ಕೆ ಜಯ ತಂದುಕೊಟ್ಟಿದೆ.
ರೇವತಿ ಅವರೊಬ್ಬರ ಸಾಕ್ಷಿಯಿಂದ ಇಂದು ನ್ಯಾಯಾಲಯವು ಒಂಬತ್ತು ಆರೋಪಿ ಪೊಲೀಸ್ ಅಧಿಕಾರಿಗಳಿಗೆ ಆರು ವರ್ಷಗಳ ಬಳಿಕ ಮರಣದಂಡನೆ ವಿಧಿಸಲು ಸಾಧ್ಯವಾಯಿತು. ಅಷ್ಟಕ್ಕೂ ಕಾನ್​ಸ್ಟೇಬಲ್​ ರೇವತಿ ಅವರು ಸತ್ಯದ ಪರವಾಗಿ ನಿಲ್ಲುವುದಾಗಿ ನಿರ್ಧರಿಸಿದ್ದರಿಂದ ಮಾತ್ರ ಇಷ್ಟೆಲ್ಲ ನಡೆಯಿತು. ಇಲ್ಲದಿದ್ದರೆ ಸತ್ಯ ಮಣ್ಣಿನಲ್ಲಿ ಮಣ್ಣಾಗುತ್ತಿತ್ತು. ಅದ್ಭುತ ಮಹಿಳೆ ಮತ್ತು ಖಾಕಿ ರೇವತಿ ಅವರಿಗೆ ದೇಶವ್ಯಾಪಿ ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದೆ.

ಏನಿದು ಘಟನೆ?
ಜೂನ್ 19, 2020ರಂದು, ತಮಿಳುನಾಡಿನ ಸಾತನ್ಕುಲಂ ನಗರದಲ್ಲಿ, ಕೋವಿಡ್​-19 ಲಾಕ್‌ಡೌನ್ ಸಮಯದಲ್ಲಿ ವಿಧಿಸಲಾದ ಕರ್ಫ್ಯೂನಿಂದ ಯಾರೂ ಸಹ ಅವಧಿ ಮೀರಿ ಅಂಗಡಿಗಳನ್ನು ಓಪನ್ ಮಾಡುವಂತಿರಲಿಲ್ಲ. ಆದರೆ, ಜಯರಾಜ್ ಅವರು ತಮ್ಮ ಅಂಗಡಿಯನ್ನು 10ರಿಂದ15 ನಿಮಿಷಗಳ ಕಾಲ ಹೆಚ್ಚಾಗಿ ತೆರೆದಿದ್ದಕ್ಕಾಗಿ ಪೊಲೀಸರು ಅವರನ್ನು ಒಂದಷ್ಟು ಮಾತಿನ ಚಕಮಕಿ ಬಳಿಕ ನೇರವಾಗಿ ಠಾಣೆಗೆ ಕರೆದೊಯ್ದರು. ಈ ವೇಳೆ ತಂದೆಯ ಬಂಧನವನ್ನು ಪ್ರಶ್ನಿಸಲು ಹೋದ ಬೆನ್ನಿಕ್ಸ್​ನನ್ನು ಕೂಡ ಪೊಲೀಸರು ಬಂಧಿಸಿದರು.

ಜೂನ್ 19ರ ರಾತ್ರಿಯಿಂದ ಜೂನ್ 20ರ ಮುಂಜಾನೆಯವರೆಗೆ, ತಂದೆ-ಮಗನನ್ನು ಕಸ್ಟಡಿಯಲ್ಲಿರಿಸಿ, ಮನಬಂದಂತೆ ಥಳಿಸುವ ಮೂಲಕ ಕ್ರೂರ ಚಿತ್ರಹಿಂಸೆ ನೀಡಲಾಯಿತು. ಲಾಠಿ ಮತ್ತು ಕಬ್ಬಿಣದ ರಾಡ್‌ಗಳಿಂದ ಹಿಗ್ಗಾಮುಗ್ಗಾ ಹೊಡೆಯಲಾಯಿತು, ಇದರಿಂದಾಗಿ ಅಪಾರ ರಕ್ತಸ್ರಾವವಾಗಿ, ವಿಪರೀತ ನರಳಾಟದಿಂದ ತಂದೆ-ಮಗ ಜೈಲಿನಲ್ಲೇ ಮೃತಪಟ್ಟರು. ಸಾಕ್ಷ್ಯವನ್ನು ಮರೆಮಾಡಲು ಪೊಲೀಸ್ ಠಾಣೆಯ ನೆಲದ ಮೇಲಿನ ರಕ್ತದ ಕಲೆಗಳನ್ನು ತಮ್ಮ ಬಟ್ಟೆಗಳಿಂದಲೇ ಒರೆಸುವಂತೆ ಒತ್ತಾಯಿಸಲಾಯಿತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

Leave a Comment

Your email address will not be published. Required fields are marked *