ಸಮಗ್ರ ನ್ಯೂಸ್: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇಂದು ಬುಧವಾರ (ಏಪ್ರಿಲ್ 1) ದಾಖಲೆಯ ಸಂಭ್ರಮ ಮನೆಮಾಡಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಬೆಳವಣಿಗೆ ಹಾಗೂ ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಮುಗಿಬಿದ್ದು ಷೇರು ಖರೀದಿಗೆ ಮುಂದಾಗಿದ್ದಾರೆ.
ಇದರ ಪರಿಣಾಮವಾಗಿ ಬಿಎಸ್‌ಇ ಸೆನ್ಸೆಕ್ಸ್ 1,187 ಪಾಯಿಂಟ್ಸ್‌ಗಳ ಭರ್ಜರಿ ಏರಿಕೆ ಕಂಡಿದೆ.
ಹೌದು, ಇಂದಿನ ವಹಿವಾಟಿನ ಅಂತ್ಯಕ್ಕೆ ಬಿಎಸ್‌ಇ ಸೆನ್ಸೆಕ್ಸ್ 1,187 ಪಾಯಿಂಟ್ಸ್ (ಶೇ. 1.65) ಏರಿಕೆ ಕಂಡು 73,132 ಮಟ್ಟಕ್ಕೆ ತಲುಪಿತು. ಇತ್ತ ಎನ್‌ಎಸ್‌ಇ ನಿಫ್ಟಿ 50 ಕೂಡ 348 ಪಾಯಿಂಟ್ಸ್ (ಶೇ. 1.56) ಏರಿಕೆಯಾಗಿ 22,679 ಅಂಕಗಳೊಂದಿಗೆ ವಹಿವಾಟು ಮುಗಿಸಿದೆ. ಒಂದು ಹಂತದಲ್ಲಿ ಸೆನ್ಸೆಕ್ಸ್ 2,000 ಪಾಯಿಂಟ್ಸ್‌ಗಳಿಗೂ ಅಧಿಕ ಜಿಗಿತ ಕಂಡಿದ್ದು ಗಮನಾರ್ಹ.
ಮಾರುಕಟ್ಟೆಯ ಈ ಭರ್ಜರಿ ಏರಿಕೆಯಿಂದಾಗಿ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 13 ಲಕ್ಷ ಕೋಟಿ ರೂಪಾಯಿ ಏರಿಕೆಯಾಗಿದೆ. ಬಿಎಸ್‌ಇ ಪಟ್ಟಿಯಲ್ಲಿರುವ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ (Market Cap) 412 ಲಕ್ಷ ಕೋಟಿಯಿಂದ 425 ಲಕ್ಷ ಕೋಟಿ ರೂಪಾಯಿಗೆ ಜಿಗಿದಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಶೀಘ್ರದಲ್ಲೇ ಅಂತ್ಯಗೊಳ್ಳಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಮಾರುಕಟ್ಟೆಗೆ ಬೂಸ್ಟ್ ನೀಡಿದೆ. ಬ್ರೆಂಟ್ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ಗಿಂತ ಕೆಳಕ್ಕೆ ಇಳಿದಿರುವುದು ಭಾರತದಂತಹ ಆಮದು ಅವಲಂಬಿತ ದೇಶಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಏಷ್ಯನ್ ಮತ್ತು ಅಮೆರಿಕದ ಮಾರುಕಟ್ಟೆಗಳಲ್ಲಿ ಕಂಡುಬಂದ ಚೇತರಿಕೆ ದಲಾಲ್ ಸ್ಟ್ರೀಟ್ ಮೇಲೂ ಪ್ರಭಾವ ಬೀರಿದೆ. ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಕೂಡ ಕ್ರಮವಾಗಿ ಶೇ. 2 ಮತ್ತು ಶೇ. 3 ರಷ್ಟು ಏರಿಕೆ ಕಂಡು ಹೂಡಿಕೆದಾರರಲ್ಲಿ ಹೊಸ ಭರವಸೆ ಮೂಡಿಸಿವೆ.







