ಸಮಗ್ರ ನ್ಯೂಸ್: ಕೃಷಿ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ಸಾವಯವ ಪ್ರಗತಿಪರ ಕೃಷಿಕ ದೇವಿಪ್ರಸಾದ್ ಕೆ. ಗೌಡ ಅವರಿಗೆ ಈ ವರ್ಷದ ‘ಕನ್ನಡಿಗ 2026’ ಪ್ರಶಸ್ತಿ ಲಭಿಸಿದೆ. News18 Kannada ಅರ್ಪಿಸುವ ಈ ಗೌರವವನ್ನು ಮಾರ್ಚ್ 03ರಂದು ಬೆಂಗಳೂರಿನಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಕಂದಾಯ ಸಚಿವ ಕೃಷ್ಣಬೈರೇಗೌಡಅವರು ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಕಡಮ್ಮಾಜೆ ಫಾರ್ಮ್ಸ್ನ ಎಲ್.ಎಲ್.ಬಿ ಪದವೀಧರ ದೇವಿಪ್ರಸಾದ್ ಕೆ. ಗೌಡ ಅವರು ದಿವಂಗತ ದಿನಕರ ಗೌಡ ದಂಪತಿಗಳ ಪುತ್ರರು. ಅಡಿಕೆ, ತೆಂಗು, ಕಾಳು ಮೆಣಸು, ಹಣ್ಣು-ಹಂಪಲು ಬೆಳೆಗಳೊಂದಿಗೆ ಮೀನುಗಾರಿಕೆ, ಕೋಳಿಸಾಕಣೆ, ಹೈನುಗಾರಿಕೆ ಹಾಗೂ ವಿವಿಧ ಪ್ರಾಣಿ-ಪಕ್ಷಿಗಳ ಸಾಕಣೆ ಮಾಡುವ ಮೂಲಕ ಸಮಗ್ರ ಹಾಗೂ ಸುಸ್ಥಿರ ಕೃಷಿ ಮಾದರಿಯನ್ನು ಅಳವಡಿಸಿಕೊಂಡಿದ್ದಾರೆ.
ಸಾವಯವ ಕೃಷಿಯಲ್ಲಿ ಕುಟುಂಬದ ಎಲ್ಲ ಸದಸ್ಯರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ತಾಯಿ ಕುಸುಮ, ಪತ್ನಿ, ಮಕ್ಕಳು ಹಾಗೂ ಸಹೋದರ ದಂಪತಿಗಳು ಅವರಿಗೆ ಬೆಂಬಲವಾಗಿ ನಿಂತಿದ್ದಾರೆ.
ಈ ಸಂದರ್ಭದಲ್ಲಿ ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ನ್ಯೂಸ್ 18 ಕನ್ನಡ ಸಂಪಾದಕ ಹರಿಪ್ರಸಾದ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಸಿನಿಮಾ ತಾರೆಯರು ಮತ್ತು ಸಾಧಕರು ಉಪಸ್ಥಿತರಿದ್ದರು.







