ಮಂಗಳೂರು ವಿಭಾಗಕ್ಕೆ ಆನೆ ಕಾರ್ಯಪಡೆ ಮಂಜೂರು| ಸುಳ್ಯವನ್ನು ಕೇಂದ್ರಸ್ಥಾನವನ್ನಾಗಿಸಿ ರಾಜ್ಯ ಸರ್ಕಾರ ಆದೇಶ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಭಾಗಕ್ಕೆ ಆನೆ ಕಾರ್ಯಪಡೆ(ಎಲಿಫೆಂಟ್ ಟಾಸ್ಕ್‌ಪೋರ್ಸ್) ಮಂಜೂರು ಮಾಡಿ ಸರಕಾರ‌ ಆದೇಶ ಮಾಡಿದೆ.

Ad Widget ... ..

ಮಂಗಳೂರು ವಿಭಾಗದ ಉಪ್ಪಿನಂಗಡಿ, ಸುಳ್ಯ, ಬೆಳ್ತಂಗಡಿ, ಪುತ್ತೂರು, ಪಂಜ ಮತ್ತು ಸುಬ್ರಹ್ಮಣ್ಯ ವಲಯಗಳ ವ್ಯಾಪ್ತಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿದ್ದು, ಪ್ರತಿ ವರ್ಷವೂ ಬೆಳೆ ಪರಿಹಾರ ಹಾಗೂ ಮಾನವ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಹಾಗೂ ಜನವಸತಿ ಪ್ರದೇಶಗಳಿಗೆ ಆನೆಗಳು ನುಗ್ಗಿದಾಗ ಅವುಗಳನ್ನು ಹಿಮ್ಮೆಟ್ಟಿಸಲು ಮಡಿಕೇರಿ ವಿಭಾಗದಿಂದ ಆನೆ ಕಾರ್ಯಪಡೆ ಕರೆಯಿಸಬೇಕಾಗುತ್ತಿತ್ತು. ಇದರಿಂದ ಹಿಮ್ಮೆಟ್ಟಿಸುವ ಪ್ರಕ್ರಿಯೆ ತಡವಾಗುತ್ತಿದೆ. ಆದ್ದರಿಂದ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ವಿಭಾಗಕ್ಕೆ ಹೊಸದಾಗಿ ಆನ ಕಾರ್ಯಪಡೆಯನ್ನು ರಚಿಸಿ ಆದೇಶ ಹೊರಡಿಸುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಯನ್ನು ಸಮಗ್ರವಾಗಿ ಪರಿಶೀಲಿಸಿ ಆನೆ ಕಾರ್ಯಪಡೆ ರಚಿಸಿ ಆದೇಶ ನೀಡಿದೆ.

Ad Widget

ಕಾರ್ಯಪಡೆಯಲ್ಲಿ ಒಟ್ಟು 28 ಮಂದಿ ಇರಲಿದ್ದು ಒಬ್ಬರು ಉಪವಲಯ ಅರಣ್ಯಾಧಿಕಾರಿ, 2 ಗಸ್ತು ಅರಣ್ಯ ಪಾಲಕರು, ಹೊರಗುತ್ತಿಗೆ ಆಧಾರದಲ್ಲಿ 25 ವಾಹನ ಚಾಲಕರು/ ತತ್ಸಮಾನ ಸಿಬ್ಬಂದಿಗಳು ಇರಲಿದ್ದಾರೆ.

ಈ ಆನೆ ಕಾರ್ಯಪಡೆಯ ಕೇಂದ್ರಸ್ಥಾನ ಸುಳ್ಯದಲ್ಲು ಇರಲಿದ್ದು, ಆನೆ ಕಾರ್ಯಪಡೆಯು ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು ವಿಭಾಗ, ಮಂಗಳೂರು ‘ರವರ ನಿರ್ದೇಶನದ ಅಡಿಯಲ್ಲಿ ಕಾರ್ಯನಿರ್ವಹಿಸಲಿದೆ.

ಈ ಆನೆ ಕಾರ್ಯಪಡೆ ತಂಡವು ಕಾಡಾನೆ ಹಾವಳಿ ಇರುವ ಪ್ರದೇಶಗಳಲ್ಲಿ ಗಸ್ತು ತಿರುಗುವುದು ಮತ್ತು ಜನವಸತಿ ಪ್ರದೇಶಗಳಲ್ಲಿ ಕೃಷಿ ಪ್ರದೇಶಗಳಲ್ಲಿ, ಹಾಗೂ ಕಾಫಿ ಎಸ್ಟೇಟ್‌ಗಳಲ್ಲಿ ಆನೆಗಳ ಚಲನವಲನಗಳನ್ನು ಗುರುತಿಸಿ ಕೂಡಲೇ ಸ್ಥಳಕ್ಕೆ ಧಾವಿಸಿ ಆನೆಗಳನ್ನು ಅರಣ್ಯ ಪ್ರದೇಶಕ್ಕೆ ಹಿಮ್ಮೆಟ್ಟಿಸುವುದು.ಕಾಡಾನೆ ಹಾವಳಿ ಕಂಡುಬರುವ ಪ್ರದೇಶಗಳ ಹಳ್ಳಿಗಳಲ್ಲಿನ ಸಾರ್ವಜನಿಕರಿಗೆ ಆನೆಗಳ ಚಲನವಲನ ಕುರಿತು ಮಾಹಿತಿ ನೀಡುವುದಲ್ಲದೇ ಅರಣ್ಯ ಪ್ರದೇಶದ ಒಳಗೆ ಸಂಚರಿಸದಂತೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಿ ಪ್ರಚುರ ಪಡಿಸುವುದು. ಆನೆ ಕಾರ್ಯವಡೆ ಕೇಂದ್ರಸ್ಥಾನದಲ್ಲಿ ಕಂಟ್ರೋಲ್ ರೂಂ(ನಿಯಂತ್ರಣ ಕೊಠಡಿ) ಕಾರ್ಯ ನಿರ್ವಹಿಸತಕ್ಕದ್ದು ಮತ್ತು ಕಂಟ್ರೋಲ್ ರೂಂ‌ನ ದೂರವಾಣಿ ಸಂಖ್ಯೆಯನ್ನು ಸಾರ್ವಜನಿಕರಲ್ಲಿ ಪ್ರಚುರ ಪಡಿಸುವುದು.ಈ ಆನೆ ಕಾರ್ಯಪಡೆಗಳಿಗೆ ಆನೆಹಾವಳಿ ತಡೆಗಟ್ಟುವ/ಹಿಮ್ಮೆಟ್ಟಿಸುವ ಕಾರ್ಯಕ್ಕೆ ಬೇಕಾಗುವ ಸೌಕರ್ಯ ಒದಗಿಸುವುದು. ಆನೆಹಾವಳಿ ಪ್ರದೇಶಗಳಿಗೆ ಶೀಘ್ರವಾಗಿ ತಲುಪಲು ಅನುವಾಗುವಂತೆ ವಾಹನಗಳನ್ನು ಒದಗಿಸುವುದು ಎಂದು ಆದೇಶ ಮಾಡಲಾಗಿದೆ.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಆನೆ ಕಾರ್ಯಪಡೆ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರಿಗೆ ಈ ಹಿಂದೆ ಮನವಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Leave a Comment

Your email address will not be published. Required fields are marked *