ಸಮಗ್ರ ನ್ಯೂಸ್: ಸಂಸತ್ತಿನ ಚಳಿಗಾಲದ ಅಧಿವೇಶನದ ಆರಂಭಕ್ಕೂ ಮುನ್ನವೇ ಆಡಳಿತ ಮತ್ತು ವಿಪಕ್ಷಗಳ ನಡುವಿನ ಮಾತಿನ ಚಕಮಕಿ ತಾರಕಕ್ಕೇರಿದೆ. ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳ ವರ್ತನೆಯನ್ನು ನಾಟಕ ಎಂದು ಬಣ್ಣಿಸಿದ್ದಕ್ಕೆ ಕಾಂಗ್ರೆಸ್ ನಾಯಕಿ ಹಾಗೂ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಸಂಸತ್ತಿನಲ್ಲಿ ಜನರ ಜ್ವಲಂತ ಸಮಸ್ಯೆಗಳನ್ನು ಎತ್ತಿ ತೋರಿಸುವುದು ನಾಟಕವಲ್ಲ, ಆದರೆ ಆ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶ ನೀಡದೆ ಪಲಾಯನ ಮಾಡುವುದೇ ನಿಜವಾದ ನಾಟಕ ಎಂದು ಪ್ರಧಾನಿ ವಿರುದ್ಧ ಹರಿಹಾಯ್ದಿದ್ದಾರೆ.
ಚಳಿಗಾಲದ ಅಧಿವೇಶನ ಪ್ರಾರಂಭವಾಗುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪ್ರಧಾನಿ ಮೋದಿ, ಸಂಸತ್ತು ಗದ್ದಲ ಸೃಷ್ಟಿಸುವ ಜಾಗವಲ್ಲ. ನಾಟಕ ಮಾಡಲು ಹೊರಗಡೆ ಸಾಕಷ್ಟು ಸ್ಥಳಗಳಿವೆ. ಆದರೆ ವಿಪಕ್ಷಗಳು ಸದನವನ್ನೇ ನಾಟಕದ ವೇದಿಕೆಯನ್ನಾಗಿ ಮಾಡಿಕೊಳ್ಳುತ್ತಿವೆ ಎಂದು ಟೀಕಿಸಿದ್ದರು. ಈ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ವಿರೋಧ ಪಕ್ಷಗಳ ನಾಯಕರು ಪ್ರಧಾನಿಯವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಪ್ರಧಾನಿಯವರ ಹೇಳಿಕೆಗೆ ತಿರುಗೇಟು ನೀಡಿರುವ ಪ್ರಿಯಾಂಕಾ ಗಾಂಧಿ, ದೇಶದಲ್ಲಿ ಇಂದು ಹಣದುಬ್ಬರ ಗಗನಕ್ಕೇರಿದೆ, ನಿರುದ್ಯೋಗ ತಾಂಡವವಾಡುತ್ತಿದೆ, ಮತ್ತು ಮಾಲಿನ್ಯದಂತಹ ಗಂಭೀರ ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಇಂತಹ ಸಾರ್ವಜನಿಕ ಮಹತ್ವದ ವಿಷಯಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸುವುದು ನಮ್ಮ ಕರ್ತವ್ಯವೇ ಹೊರತು ನಾಟಕವಲ್ಲ ಎಂದು ಸ್ಪಷ್ಟಪಡಿಸಿದರು.
ಚುನಾವಣಾ ಅಕ್ರಮಗಳು, ಮಣಿಪುರ ಹಿಂಸಾಚಾರ, ಮತ್ತು ಅದಾನಿ ವಿಷಯದಂತಹ ಗಂಭೀರ ಸಂಗತಿಗಳ ಬಗ್ಗೆ ಚರ್ಚೆಯಾಗಬೇಕಿದೆ. ಸಂಸತ್ತು ಇರುವುದೇ ಜನರಿಗಾಗಿ ಮತ್ತು ಜನರ ಸಮಸ್ಯೆಗಳನ್ನು ಚರ್ಚಿಸುವುದಕ್ಕಾಗಿ. ಆದರೆ, ಸರ್ಕಾರ ಈ ವಿಷಯಗಳನ್ನು ಸದನದಲ್ಲಿ ಪ್ರಸ್ತಾಪಿಸಲು ಬಿಡುತ್ತಿಲ್ಲ. ಪ್ರಜಾಪ್ರಭುತ್ವದ ವಿಷಯಗಳ ಕುರಿತು ಚರ್ಚೆಗೆ ಅವಕಾಶ ನೀಡದಿರುವುದು ಮತ್ತು ಸಂಸತ್ತಿನಿಂದ ಓಡಿ ಹೋಗುವುದೇ ಅಸಲಿ ನಾಟಕ. ಜನರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಗಂಭೀರ ಆರೋಪ ಮಾಡಿದರು.







