ಸಮಗ್ರ ನ್ಯೂಸ್: ಮುಂದಿನ 48 ಗಂಟೆಗಳಲ್ಲಿ ‘ಸೆನ್ಯಾರ್’ ಎಂಬ ಚಂಡಮಾರುತ ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಚಂಡಮಾರುತವಾಗಿ ಬದಲಾಗಲಿದ್ದು, ಪರಿಣಾಮ ತಮಿಳುನಾಡು ಭಾಗದಲ್ಲಿ ಸಿಕ್ಕಾಪಟ್ಟೆ ಮಳೆಯಾಗಲಿದ್ದು, ನಮ್ಮ ರಾಜ್ಯದಲ್ಲೂ ಮಳೆ ಬೀಳಲಿದೆ.
ಈ ಚಂಡಮಾರುತಕ್ಕೆ ಸೆನ್ಯಾರ್ ಚಂಡಮಾರುತ ಎಂದು ಹೆಸರಿಸಲಾಗಿದೆ. ಯುಎಇ ಈ ಹೆಸರನ್ನು ಇಟ್ಟಿದ್ದು, ಅದರ ಅರ್ಥ ‘ಸಿಂಹ’ ಎಂದಾಗಿದೆ. ನವೆಂಬರ್ 29 ಮತ್ತು 30ರ ನಡುವೆ ಈ ಚಂಡಮಾರುತವು ತಮಿಳುನಾಡಿನ ರಾಜಧಾನಿ ಚೆನ್ನೈನ ಕರಾವಳಿಯ ಹತ್ತಿರ ಚಲಿಸಬಹುದು ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರ (ಆರ್ಎಂಸಿ)ದ ಪ್ರಕಾರ, ಮುಂಬರುವ ದಿನಗಳಲ್ಲಿ ತಮಿಳುನಾಡಿನಲ್ಲಿ ಭಾರೀ ಮಳೆಯಾಗಬಹುದು. ತಿರುನಲ್ವೇಲಿ ಮತ್ತು ತೆಂಕಸಿಗೆ ಆರೆಂಜ್ ಅಲರ್ಟ್ ನೀಡಲಾಗಿದ್ದು, ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ.
ಸೆನ್ಯಾರ್ ಚಂಡಮಾರುತದ ಪರಿಣಾಮ ಅಂಡಮಾನ್-ನಿಕೋಬಾರ್ ಮಾತ್ರವಲ್ಲ, ದಕ್ಷಿಣದ ರಾಜ್ಯಗಳಲ್ಲಿಯೂ ಭಾರಿ ಮಳೆಯಾಗಲಿದೆ. ತಮಿಳುನಾಡಿನಲ್ಲಿ ನವೆಂಬರ್ 22ರಿಂದ 25ರವರೆಗೆ, ಕೇರಳ ಮತ್ತು ಮಾಹೆಯಲ್ಲಿ ನ.22ರಿಂದ 26ರವರೆಗೆ, ಲಕ್ಷದ್ವೀಪದಲ್ಲಿ ಇಂದು ಮಳೆಯಾಗಲಿದೆ. ಆಂಧ್ರಪ್ರದೇಶದ ದಕ್ಷಿಣ ಭಾಗದಲ್ಲಿಯೂ ಮಳೆ ಬೀಳಲಿದೆ. ಸೆನ್ಯಾರ್ ಚಂಡಮಾರುತದ ಪ್ರಭಾವ ಕರ್ನಾಟಕದಲ್ಲಿಯೂ ಆಗಲಿದೆ. ಕರಾವಳಿ ಭಾಗ ಸೇರಿ, ಹಲವು ಭಾಗಗಳಲ್ಲಿ ಮಳೆ ಬೀಳಲಿದೆ.
ತಮಿಳುನಾಡು, ಕೇರಳ, ಮಾಹೆ, ಲಕ್ಷದ್ವೀಪ, ಆಂಧ್ರಪ್ರದೇಶ, ಕರ್ನಾಟಕ, ಯಾನಂ, ಹಾಗೂ ಅಂಡಮಾನ್ ಮತ್ತು ನಿಕೋಬರ್ ದ್ವೀಪಗಳ ಕೆಲಭಾಗಗಳಲ್ಲಿ ಮುಂದಿನ ಕೆಲ ದಿನಗಳಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೇಯಾಗುವ ನಿರೀಕ್ಷೆಯಿದ್ದು, ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಈ ವೇಳೆ ಸ್ಥಳೀಯ ಕೆಲ ಪ್ರದೇಶಗಳು ಜಲಾವೃತ ಅಥವಾ ಪ್ರವಾಹಕ್ಕೊಳಗಾಗಿ ಸಾರಿಗೆ ಮತ್ತು ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯಾಗಬಹುದು. ಈ ಹಿನ್ನಲೆ ದಕ್ಷಿಣ ಭಾರತದ ಕೆಲ ರಾಜ್ಯಗಳಲ್ಲಿ ಪರಿಸ್ಥಿತಿ ತೀವ್ರಗೊಳ್ಳುವ ಸಾಧ್ಯತೆ ಹೆಚ್ಚಿರುವುದರಿಂದ ಆ ಭಾಗದ ಜನರಿಗೆ ಮುಂಜಾಗ್ರತಾ ಕ್ರಮಗಳನ್ನು ವಹಿಸಲು ಸೂಚಿಸಲು ಹವಾಮಾನ ಇಲಾಖೆ ಅಲ್ಲಿನ ಅಧಿಕಾರಿಗಳಿಗೆ ತಿಳಿಸಿದೆ.







