ಸಮಗ್ರ ನ್ಯೂಸ್: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ವಿಚಾರಣೆಗೆ ಹಾಜರಾದ ವೇಳೆ ಕಾರವಾರ ಶಾಸಕ ಸತೀಶ್ ಸೈಲ್ ಅವರನ್ನು ಬಂಧಿಸಲಾಗಿದೆ.
ಆಗಸ್ಟ್ 13, 14ರಂದು ಇಡಿ ಅಧಿಕಾರಿಗಳಿಂದ ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ನಿವಾಸದ ಮೇಲೆ ದಾಳಿ ನಡೆದಿತ್ತು.
ಈ ವೇಳೆ ಅಕ್ರಮ ಆಸ್ತಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ವಿಚಾರಣೆ ಬಳಿಕ ಶಾಸಕನನ್ನು ಬಂಧಿಸಲಾಗಿದೆ.
ಇಡಿ ಅಧಿಕಾರಿಗಳು ಆ.13 ಮತ್ತು 14ರಂದು ಶಾಸಕ ಸತೀಶ್ ಸೈಲ್ ಅವರಿಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದರು. ದಾಳಿಯಲ್ಲಿ ವೇಳೆ 1.68 ಕೋಟಿ ರೂಪಾಯಿ ನಗದು, 6.75 ಕೆಜಿ ಚಿನ್ನ (ಆಭರಣ ಮತ್ತು ಚಿನ್ನದ ಬಿಸ್ಕೆಟ್‌ಗಳು ಸೇರಿದಂತೆ) ಪತ್ತೆಯಾಗಿತ್ತು. 14.13 ಕೋಟಿ ರೂಪಾಯಿ ಮೌಲ್ಯದ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿತ್ತು. ಹಣಕಾಸು ದಾಖಲೆಗಳು, ಇ-ಮೇಲ್‌ಗಳು, ಆಸ್ತಿ-ಸ್ಥಿರಾಸ್ತಿ ದಾಖಲೆಗಳು ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಇಡಿ ಬೆಂಗಳೂರು ಘಟಕದ ಅಧಿಕಾರಿಗಳು, ಶಾಸಕನಿಗೆ ಸಂಬಂಧಿಸಿದ ಕಾರವಾರ, ಗೋವಾ, ಮುಂಬೈ ಮತ್ತು ದೆಹಲಿಯ ಸ್ಥಳಗಳಲ್ಲಿ ಏಕಕಾಲಕ್ಕೆ ನಡೆಸಿದ್ದರು.
ಈ ಹಿಂದೆ ಬೇಲೆಕೇರಿ ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಶಾಸಕ ಬಂಧನವಾಗಿ, ಜಾಮೀನು ಪಡೆದು ಬಿಡುಗಡೆಯಾಗಿದ್ದರು. 2009-10ರ ಸಮಯದಲ್ಲಿ ಬೇಲೆಕೇರಿ ಬಂದರಿನಿಂದ ಕಬ್ಬಿಣದ ಅದಿರನ್ನು ಅಕ್ರಮವಾಗಿ ವಿದೇಶಕ್ಕೆ ಸಾಗಾಟ ಮಾಡಿದ ಆರೋಪದ ಮೇಲೆ 2010ರಲ್ಲಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ತನಿಖೆಯನ್ನು ನಂತರ ಸಿಬಿಐಗೆ ವರ್ಗಾಯಿಸಲಾಗಿತ್ತು.
2024ರ ಅಕ್ಟೋಬರ್‌ನಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸತೀಶ್ ಸೈಲ್ ಸೇರಿದಂತೆ ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆ ಮತ್ತು 9.6 ಕೋಟಿ ರೂ. ದಂಡ ವಿಧಿಸಿತ್ತು. ಆದರೆ, ಹೈಕೋರ್ಟ್ ಶಿಕ್ಷೆ ಅಮಾನತುಗೊಳಿಸಿ ಜಾಮೀನು ನೀಡಿದ್ದರಿಂದ ಬಿಡುಗಡೆಯಾಗಿದ್ದರು. ಈಗ, ಅಕ್ರಮ ಹಣ ವರ್ಗಾವಣೆ (PMLA) ಕಾಯ್ದೆಯಡಿ ಬಂಧನವಾಗಿದ್ದಾರೆ.







