ಮಗ್ರ ನ್ಯೂಸ್: ಸಾರಿಗೆ ನೌಕರರ ಮುಷ್ಕರ ನಾಳೇವರಗೆ ತಡೆಹಿಡಿಯುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ಮಹತ್ವದ ಆದೇಶ ನೀಡಿತ್ತು. ಆದರೆ ಹೈಕೋರ್ಟ್ ಆದೇಶದ ನಡುವೆಯೂ ನಾಳೆಯಿಂದ ಅನಿರ್ದಿಷ್ಟಾವದಿ ಮುಷ್ಕರ ಆರಂಭಿಸುವುದು ಖಚಿತ ಎಂದು ಸಾರಿಗೆ ನೌಕರ ಮುಖಂಡ ಅನಂತ ಸುಬ್ಬರಾವ್ ಹೇಳಿದ್ದಾರೆ.
ಹೀಗಾಗಿ ನಾಳೆಯಿಂದ ಸಾರಿಗೆ ಬಸ್ ಸೇವೆ ಲಭ್ಯವಿರುವುದಿಲ್ಲ. ಸರ್ಕಾರಿ ಸಾರಿಗೆ ಬಸ್ ಅವಲಂಬಿಸಿರುವರು ಇದೀಗ ಖಾಸಗಿ ವಾಹನಗಳ ಅವಲಂಬಿಸಬೇಕಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಗಧಿಯಂತೆ ಆಗಸ್ಟ್ 5ರಿಂದ ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಆರಂಭಗೊಳ್ಳಲಿದೆ ಎಂದು ಸುಬ್ಬರಾವ್ ಸ್ಪಷ್ಟಪಡಿಸಿದ್ದಾರೆ. ಹೈಕೋರ್ಟ್ ಆದೇಶದಲ್ಲಿ ಜಂಟಿ ಕ್ರಿಯಾ ಸಮಿತಿ ಸಂಘಟನೆಯನ್ನು ಪಾರ್ಟಿ ಮಾಡಿಲ್ಲ. ಹೀಗಾಗಿ ಕೋರ್ಟ್ ಆದೇಶ ನಮಗೆ ಅನ್ವಯವಾಗುವುದಿಲ್ಲ ಎಂದು ಸುಬ್ಬರಾವ್ ಹೇಳಿದ್ದಾರೆ. ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಸುಬ್ಬರಾವ್ ಸ್ಪಷ್ಟಪಡಿಸಿದ್ದಾರೆ.
ಸಾರಿಗೆ ನೌಕರ ಮುಷ್ಕರ ನಾಳೆ (ಆ.05) ಬೆಳಗ್ಗೆ 6 ಗಂಟೆಯಿಂದ ಆರಂಭಗೊಳ್ಳಲಿದೆ ಎಂದು ಸುಬ್ಬರಾವ್ ಹೇಳಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ರಾಜ್ಯಾದ್ಯಂತ ಡಿಪೋಗಳಲ್ಲೇ ಬಸ್ ಸ್ಥಗಿತವಾಗಬೇಕು. ಅಧಿಕಾರಿಗಳು ಒತ್ತಡ ಹಾಕಿ ಬಸ್ ಓಡಿಸುವ ಪ್ರಯತ್ನ ಮಾಡಬೇಡಿ. ಕಾರಣ ಶಾಂತಿಯುತವಾಗಿ ಮುಷ್ಕರ ಮುಂದುವರಿಯಬೇಕು. ಇದರ ನಡುವೆ ಯಾವುದೇ ಒತ್ತಡ ಪ್ರಯತ್ನ ಬೇಡ ಎಂದು ಸುಬ್ಬರಾವ್ ಹೇಳಿದ್ದಾರೆ. ಯಾವ ಬೆದರಿಕೆ ಹಾಕಿದ್ರು ಜಗ್ಗದೇ ನೀವು ಮುಷ್ಕರದಲ್ಲಿ ಭಾಗಿಯಾಗಿ ಎಂದು ಅನಂತ್ ಸುಬ್ಬರಾವ್ ಕರೆಕೊಟ್ಟಿದ್ದಾರೆ.







