ಸಮಗ್ರ ನ್ಯೂಸ್: ದೈನಂದಿನ ಜೀವನದಲ್ಲಿ ರಾಶಿಗಳ ಪ್ರಭಾವ ಮಹತ್ವದ್ದು. ರಾಶಿಗಳ ಚಲನೆ ಹಾಗೂ ಪ್ರಭಾವದಿಂದ ನಿತ್ಯ ಜೀವನದ ಫಲಾಫಲಗಳು ನಿರ್ದರಿಸುತ್ತವೆ. ಈ ವಾರ ಯಾವ ರಾಶಿಗೆ ಶುಭ? ಯಾರಿಗೆ ಲಾಭ? ನೋಡೋಣ ಬನ್ನಿ…
ಮೇಷ: ದ್ವಿತೀಯದಲ್ಲಿ ಗುರುವಿರುವುದರಿಂದ ಗುರು ಬಲ ಇದ್ದು, ಏಕಾದಶ ಶನಿ ಇರುವುದರಿಂದ ಯಾವುದಕ್ಕೂ ಯೋಚನೆ ಮಾಡದೆ ಭಗವಂತನನ್ನು ನಂಬಿ ಬದುಕಿರಿ. ಫೆ. 4ರಿಂದ ಗುರು ವಕ್ರ ತ್ಯಾಗ ಮಾಡಿದ ನಂತರ ಇಚ್ಛಿತ ಕಾರ್ಯಗಳಲ್ಲಿ ಯಶಸ್ಸು ಸಾಧ್ಯ. ಉಜ್ಜಯಿನಿಯ ಮಹಾಕಾಲೇಶ್ವರನನ್ನು ಪೂಜಿಸಿ.
ವೃಷಭ: ಲಗ್ನದಲ್ಲಿನ ಗುರುವು ಮೇ ನಂತರ ದ್ವಿತೀಯಕ್ಕೆ ಬರುತ್ತಾನೆ. ಮಾ. 29ರಂದು ಶನಿಯು ಏಕಾದಶ ಸ್ಥಾನಕ್ಕೆ ಬರಲಿದ್ದು, ಶುಭ ಸಂಗತಿ ಕೇಳುತ್ತೀರಿ. ಶುಭ ಫಲ ಅನುಭವಿಸುತ್ತೀರಿ. ಮನಸ್ಸಿಗೆ ಒತ್ತಡ ಬೇಡ. ಅತಿಯಾದ ನಿರೀಕ್ಷೆ ಬೇಡ. ಹೆಣ್ಣು ಮಕ್ಕಳನ್ನು ದೇವತೆಯಂತೆ ಕಂಡರೆ ದೇವಿಯೇ ನಿಮಗೆ ಒಲಿಯುತ್ತಾಳೆ. ಆರೋಗ್ಯದ ಬಗ್ಗೆ ಎಚ್ಚರವಿರಲಿ.
ಮಿಥುನ: ದ್ವಾದಶ ಗುರು, ಲಗ್ನದಲ್ಲಿ ಅಂಗಾರಕ ಇರುವುದರಿಂದ ಒಳ್ಳೆಯ ಕಾಲಕ್ಕೆ ಇನ್ನೂ ಕಾಯಬೇಕು. ಸಾವಧಾನಕ್ಕೂ ನಿಧಾನಕ್ಕೂ ಬಹಳ ವ್ಯತ್ಯಾಸವಿಲ್ಲ. ಸಮಾಧಾನದಿಂದ ಯೋಚಿಸಿ ಕೆಲಸದಲ್ಲಿ ತೊಡಗಿಸಿಕೊಂಡರೆ ಶ್ರೇಯಸ್ಸನ್ನು ಪಡೆಯಬಹುದು. ಲಕ್ಷ್ಮೀಸಹಿತ ನಾರಾಯಣನನ್ನು ಪೂಜಿಸಿ. ಆರೋಗ್ಯಕ್ಕಾಗಿ ವಿಷ್ಣುವನ್ನು ಪ್ರಾರ್ಥಿಸಿ.
ಕಟಕ: ಏಕಾದಶದಲ್ಲಿ ಗುರುವೇ ಸಾಕು. ‘ಬಲಾಯ ಬಲಂ ಅಧಿಕ ಬಲಂ ಏಕಾದಶ ಗುರು ಸ್ಥಿತಂ ಸರ್ವದೈವ ಭಲಂ’ ಎಂದು ಅರ್ಥ ಮಾಡಿಕೊಳ್ಳಿ. ಶರೀರಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳಬೇಡಿ. ದೇವರು ಸೃಷ್ಟಿಸಿದ ದೇಹವನ್ನು ಶಿಕ್ಷಿಸದೆ ಬುದ್ಧಿಯನ್ನು ಉಪಯೋಗಿಸಿ ಕೆಲಸವನ್ನು ಮಾಡಿದರೆ ಆರೋಗ್ಯ, ಧನ, ಸುಖ, ಸಂತೋಷ ಇರುತ್ತದೆ.
ಸಿಂಹ: ಆಧ್ಯಾತ್ಮಿಕ ಜೀವನವು ಮನುಷ್ಯನನ್ನು ಒಳ್ಳೆಯ ದಾರಿಯಲ್ಲಿ ಕರೆದೊಯ್ಯುತ್ತದೆ. ನವನವೀನ ತಾಪತ್ರಯ ಬರುತ್ತವೆ. ಮಾತಾ ಪಿತೃಗಳ ಸೇವೆಯನ್ನು ಮಾಡಿದಲ್ಲಿ ಯಾವ ದೈವ ಬೇಕಾದರೂ ಒಲಿಯುತ್ತದೆ. ಪಿತೃ ಸ್ಮರಣ ಮಾತ್ರೇಣ ಪುಣ್ಯಂ ಲಭತೇ ತಾತ್ಪುನ್ಯಾಣಿ ಧನಂ ಧಾನ್ಯಂ ಅತಿ ಸುಖಂ ಲಭ್ಯತೆ.
ಕನ್ಯಾ: ಕೇತು ಈ ರಾಶಿಯಲ್ಲಿ ಇರುವುದರಿಂದ ಕೆಲವು ಅಡಚಣೆ ಬರಬಹುದು. ಅತಿಯಾದ ಕೆಲಸ ಮಾಡಿ ಹೆಚ್ಚು ಸಂಪಾದನೆ ಮಾಡಿ ಮೈ ಸುಟ್ಟುಕೊಳ್ಳಬಾರದು. ದಾನ ಧರ್ಮ ಮಾಡುವವನಿಗೆ ಅರ್ಥವೂ ಸಿಕ್ಕಿ ಕಾಮನೆ ಈಡೇರುತ್ತದೆ. ಧರ್ಮವನ್ನು ಕಾಪಾಡಿದರೆ ಅದೇ ನಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತದೆ.
ತುಲಾ: ಪಂಚಮ ಶನಿಯ ನಿರ್ಗಮನ. ಶನಿಯು 6ನೇ ಮನೆಯನ್ನು ಸೇರಿ ಆನೆ ಬಲ ಕೊಡುವುದರಲ್ಲಿ ಸಂದೇಹ ಇಲ್ಲ. ದೈವದಲ್ಲಿ ಶ್ರದ್ಧೆ ಇಟ್ಟರೆ ಯಾವ ಗ್ರಹ ಎಲ್ಲೇ ಸ್ಥಿತವಾಗಿದ್ದರೂ ಧೈರ್ಯದಿಂದ ಇರಬಹುದು. ನಿಮಗೆ ದೈವವೇ ದಾರಿ ತೋರಿಸಿ ದುಃಖ ದೂರ ಮಾಡಿ ಇಚ್ಛಿತ ಕಾರ್ಯಗಳಲ್ಲಿ ಯಶಸ್ಸು ತಂದುಕೊಡುತ್ತದೆ.
ವೃಶ್ಚಿಕ: ಮನುಷ್ಯನಿಗೆ ಮನಶ್ಶಾಂತಿ ಮುಖ್ಯ. ಕೋಪ ಸರ್ವವನ್ನೂ ನಾಶ ಮಾಡುತ್ತದೆ. ತಾಳ್ಮೆಯಿಂದ ರಾಮನು ಅಯೋಧ್ಯಾ ಮಹಾರಾಜನಾಗಿ ಭರತ ಖಂಡಕ್ಕೆ ಪುಣ್ಯವನ್ನು ಇಟ್ಟು ಮಹಾವಿಷ್ಣು ರೂಪದಲ್ಲಿ ಇದ್ದಾನೆ. ಕೋಪವನ್ನು ಬಿಡಿ. ನಯವಾದ ಮಾತಿರಲಿ. ಮಾತಿನಲ್ಲಿ ಪ್ರೀತಿಯಿರಲಿ. ಪ್ರೀತಿಯಲ್ಲಿ ಉಪಕಾರದ ಬುದ್ಧಿ ಇರಲಿ.
ಧನಸ್ಸು: ಧನುರ್ಮಾಸ ವಿಶಿಷ್ಟವಾದದ್ದು. ಅದೊಂದೇ ಮಾಸದಲ್ಲಿ ಸೂರ್ಯೋದಯಕ್ಕೆ ಮುನ್ನವೇ ಮಹಾವಿಷ್ಣುವಿಗೆ ಮಂಗಳಾರತಿ ಮಾಡುತ್ತೇವೆ. ಹೆಸರು ಬೇಳೆ ಭಕ್ಷ್ಯ ಸಮರ್ಪಿಸಿ ಒಲಿಸಿಕೊಳ್ಳುತ್ತೇವೆ. ದೈವಾರಾಧಕರೂ ಆದ ನೀವು ರಾಮನ ಸ್ಮರಣೆ ಮಾಡಿ ಗುರು ದತ್ತಾತ್ರೇಯನನ್ನು ಪೂಜಿಸಿ. ಮುದ್ಗ ಧಾನ್ಯವನ್ನು ದಾನ ಮಾಡಿ.
ಮಕರ: ಮನುಷ್ಯನ ಜಾತಕದಲ್ಲಿ ಗ್ರಹಗಳು ಯಾವ ಕೆಟ್ಟ ಕೆಲಸಗಳನ್ನೂ ಮಾಡುವುದಿಲ್ಲ. ತಾವು ತಪ್ಪು ಮಾಡಿ ಗ್ರಹಗಳ ಮೇಲೆ ಹಾಕುವುದು ಮನುಷ್ಯನ ಸ್ವಭಾವ. ದೈವ ರಕ್ಷೆ ಎಂಬುದು ಸಾಗರದಂತೆ. ತಪ್ಪುಗಳನ್ನು ಮಾಡದೆ ತೆಪ್ಪಗೆ ದೈವವನ್ನು ನಂಬಿ ಮುನ್ನಡೆದರೆ ಧನ ಸುಖ ಲಾಭ ಕೀರ್ತಿ ಸಂಪಾದಿಸಬಹುದು.
ಕುಂಭ: ಅನಂತಪದ್ಮನಾಭ ವ್ರತ ಮಾಡಿದ ಕೌಂಡಿನ್ಯ ಋಷಿ ಉದ್ಧಾರ ಆಗುತ್ತಾನೆ. ಅನಂತ ಎಂದರೆ ಆದಿ ಅಂತ್ಯ ಇಲ್ಲದವನು. ಶನಿ ಸಂಚಾರ ಇನ್ನೂ ಮುಗಿದಿಲ್ಲ. ಕೃಷ್ಣ ಅಷ್ಟೋತ್ತರ ಪಠಿಸಿ. ಗುರುಗಳ ಸಾನ್ನಿಧ್ಯಕ್ಕೆ ಹೋಗಿ ಕೃಷ್ಣ ಮಂತ್ರ ಉಪದೇಶ ಪಡೆಯಿರಿ. ಏಕಾದಶಿ/ ಅಷ್ಟಮಿಯಂದು ಮಾಯ ಶರೀರದ ಕೃಷ್ಣನನ್ನು ಪೂಜಿಸಿ. ನಿಮ್ಮನ್ನು ಬಂಗಾರದ ಮನುಷ್ಯನನ್ನಾಗಿಸುತ್ತಾನೆ.
ಮೀನ: ಎಲ್ಲ ರಾಶಿಗಳಿಗೆ ಅಧಿದೇವತೆ ಇದ್ದಾರೆ. ನಿಮ್ಮ ರಾಶಿಯ ಅಧಿದೇವತೆ ಗುರುವೇ. ಹೀಗಿರುವಾಗ ಕಾಲ ಮೇಲೆ ಕಲ್ಲು ಎತ್ತಿಹಾಕಿಕೊಂಡು ಪಾಡು ಪಡಬಾರದು. ವಿವೇಕದಿಂದ ವರ್ತಿಸಿ. ಹೆಂಡತಿಯನ್ನಾಗಲಿ, ತಾಯಿಯನ್ನಾಗಲಿ, ಸಹೋದರಿಯನ್ನಾಗಲಿ ಯಾರನ್ನೂ ಕೆಳಮಟ್ಟದಲ್ಲಿ ಕಾಣಬಾರದು. ಗುರುವಿನ ಮೇಲೆ ನಂಬಿಕೆ ಇರಲಿ.







