ಸಮಗ್ರ ನ್ಯೂಸ್: ಹೊರ್ಮುಜ್ ಜಲಸಂಧಿ ದಾಟುತ್ತಿದ್ದ ಹಡಗಿನ ಮೇಲೆ ಇರಾನ್ ನಡೆಸಿದ ದಾಳಿಗೆ ಪ್ರತಿಯಾಗಿ ಅಮೆರಿಕ ಸೇನೆಯು ಭಾನುವಾರ ಬೆಳಿಗ್ಗೆ ಇರಾನ್‌ನ ಹಲವು ಸ್ಥಳಗಳ ಮೇಲೆ ಭಾರಿ ವಾಯುದಾಳಿ ನಡೆಸಿದೆ. ಈ ದಾಳಿಗೆ ಇರಾನ್ ಸೇನೆ ತಿರುಗೇಟು ನೀಡಿದ್ದು, ಬಹರೇನ್, ಕುವೈತ್, ಕತಾರ್ ಮತ್ತು ಒಮಾನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳತ್ತ ಕ್ಷಿಪಣಿಗಳನ್ನು ಹಾರಿಸಿದೆ. ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣ ಬಂದ್ ಮಾಡಿರುವುದಾಗಿ ಇರಾನ್ ಸೇನೆ ಘೋಷಿಸಿದೆ.
‘ಈ ಘಟನೆಯ (ಅಮೆರಿಕದ ದಾಳಿ) ನಂತರ, ಮುಂದಿನ ಸೂಚನೆ ಬರುವವರೆಗೆ ಮತ್ತು ಈ ಪ್ರದೇಶದಲ್ಲಿ ಅಮೆರಿಕದ ಹಸ್ತಕ್ಷೇಪ ಕೊನೆಗೊಳ್ಳುವವರೆಗೆ ಹೊರ್ಮುಜ್ ಜಲಸಂಧಿಯನ್ನು ಮುಚ್ಚಲಾಗುತ್ತದೆ’ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್ (ಐಆರ್‌ಜಿಸಿ) ತಿಳಿಸಿದೆ.
‘ಕೆಲವು ಹಡಗುಗಳು ನಮ್ಮ ಎಚ್ಚರಿಕೆಯನ್ನು ನಿರ್ಲಕ್ಷಿಸಿದವು. ನಾವು ಅನುಮತಿ ನೀಡಿದ ಮಾರ್ಗದಲ್ಲೇ ಸಂಚರಿಸುವಂತೆ ಅವುಗಳಿಗೆ ಸೂಚಿಸಿದೆವು. ಎಚ್ಚರಿಕೆ ನೀಡಲು ಹಡಗೊಂದರ ಮೇಲೆ ದಾಳಿ ನಡೆಸಲಾಯಿತು’ ಎಂದು ಹೇಳಿದೆ.
ಆದರೆ, ಹೊರ್ಮುಜ್ ಜಲಸಂಧಿ ಎಲ್ಲಾ ನೌಕೆಗಳ ಸಂಚಾರಕ್ಕೆ ಮುಕ್ತವಾಗಿದೆ ಎಂದು ಅಮೆರಿಕ ಸೇನೆ ತಿಳಿಸಿದೆ. ‘ಹೊರ್ಮುಜ್‌ನಲ್ಲಿ ನೌಕೆಗಳ ಸುಗಮ ಸಂಚಾರ ಖಚಿತಪಡಿಸಲು ಅಮೆರಿಕದ ಸೇನಾ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಜಲಸಂಧಿಯ ಮೇಲೆ ಇರಾನ್‌ಗೆ ಯಾವುದೇ ನಿಯಂತ್ರಣ ಇಲ್ಲ’ ಎಂದು ಸೇನೆಯ ಸೆಂಟ್ರಲ್ ಕಮಾಂಡ್ ಹೇಳಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ ‘ಹಡಗುಗಳ ಸಂಚಾರಕ್ಕೆ ಹೊರ್ಮುಜ್ ಮುಕ್ತವಾಗಿದೆ’ ಎಂದಿದ್ದಾರೆ.
ಬುಧವಾರ ಮತ್ತು ಗುರುವಾರ ಇರಾನ್ ಮೇಲೆ ದಾಳಿ ನಡೆಸಿದ್ದ ಅಮೆರಿಕ, ಭಾನುವಾರ ಮತ್ತೊಂದು ಸುತ್ತಿನ ದಾಳಿ ನಡೆಸಿತು. ಈ ಬೆಳವಣಿಗೆಯಿಂದ ಪಶ್ಚಿಮ ಏಷ್ಯಾ ಯುದ್ಧಕ್ಕೆ ಶಾಶ್ವತ ಅಂತ್ಯಹಾಡಲು ನಡೆಯುತ್ತಿರುವ ಪ್ರಯತ್ನಗಳಿಗೆ ಹಿನ್ನಡೆ ಉಂಟಾಗಿದೆ.
ದಾಳಿಯಲ್ಲಿ ಇರಾನ್‌ನ ಸುಮಾರು 140 ಗುರಿಗಳನ್ನು ನಾಶಪಡಿಸಲಾಯಿತು ಎಂದು ಸೆಂಟ್ರಲ್ ಕಮಾಂಡ್ ಹೇಳಿದೆ. ಈ ಹಿಂದಿನ ಎರಡು ಸುತ್ತುಗಳ ದಾಳಿಗೆ ಹೋಲಿಸಿದರೆ, ಭಾನುವಾರ ದೊಡ್ಡ ಪ್ರಮಾಣದ ದಾಳಿ ನಡೆದಿದೆ.
‘ಕ್ಷಿಪಣಿ ಮತ್ತು ಡ್ರೋನ್ ಉಡಾವಣಾ ಕೇಂದ್ರಗಳು, ಶಸ್ತ್ರಾಸ್ತ್ರ ಸಂಗ್ರಹಾಗಾರ, ಸಂವಹನ ಉಪಕರಣಗಳು ಮತ್ತು ಇತರ ತಾಣಗಳ ಮೇಲೆ ದಾಳಿ ನಡೆಸಲಾಯಿತು. ಈ ದಾಳಿಗಳು ಹಡಗುಗಳ ಸಂಚಾರಕ್ಕೆ ಬೆದರಿಕೆ ಹಾಕುವ ಇರಾನ್‌ನ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ’ ಎಂದು ಅಮೆರಿಕ ಸೇನೆ ತಿಳಿಸಿದೆ.








