ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುಟುಂಬ ಸಮೇತ ಭೇಟಿ ನೀಡಿ ಮಹಾಪೂಜೆ, ಆಶ್ಲೇಷ ಬಲಿ ಪೂಜೆಯಲ್ಲಿ ಭಾಗಿಯಾದರು. ಕುಟುಂಬ ಸಮೇತರಾಗಿ ಆಗಮಿಸಿದ ಡಿಕೆ ಶಿವಕುಮಾರ್ ಅವರು ಆನೆ ಬಳಿ ಆಶೀರ್ವಾದ ಪಡೆದರು. ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ವಾದ್ಯ ಮೇಳ ಕುಂಬ ಕಳಶದೊಂದಿಗೆ ಡಿಕೆಶಿಯನ್ನ ಸ್ವಾಗತಿಸಿದರು.
ಈ ವೇಳೆ ಮಾತನಾಡಿದ ಡಿಕೆ ಶಿವಕುಮಾರ್, ನಾವು ಹಿಂದೂ ಧರ್ಮದವರು. ನಮ್ಮ ರಾಜ್ಯದಲ್ಲಿ ಎಲ್ಲಾ ಸಂಸ್ಕೃತಿಗಳನ್ನು ತೆಗೆದುಕೊಂಡು ಹೋಗೋರೋ. ಧಾರ್ಮಿಕ ದತ್ತಿ ಇಲಾಖೆಯನ್ನ ಇಟ್ಟುಕೊಂಡಿದ್ದೇವೆ. ಅವರವರ ನಂಬಿಕೆ ಪ್ರಕಾರ ಅವರವರು ಪ್ರಾರ್ಥನೆ ಮಾಡ್ತಾರೆ. ಬಹಳ ದಿನಗಳಿಂದ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗಬೇಕೆಂಬ ಆಸೆ ಇತ್ತು. ಇವತ್ತು ಕುಟುಂಬ ಸಮೇತ ಬಂದಿದ್ದೇನೆ ಎಂದರು.
ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ಡಿಸಿಎಂ ಅವರನ್ನು ಸ್ವಾಗತಿಸಿದರು. ಎಂಎಲ್ಸಿ ಹರೀಶ್ ಕುಮಾರ್, ಕಾಂಗ್ರೆಸ್ ಮುಖಂಡರಾದ ರಕ್ಷಿತ್ ಶಿವರಾಂ, ಪದ್ಮರಾಜ್ ರಾಮಯ್ಯ, ನಿತ್ಯಾನಂದ ಮುಂಡೋಡಿ, ಅಶೋಕ್ ನೆಕ್ರಾಜೆ, ಮತ್ತಿತ್ತರರು ಜೊತೆಗಿದ್ದರು.