ಸಮಗ್ರ ನ್ಯೂಸ್: ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯಲ್ ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ಕೆಲವೇ ವಾರಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಇದೇ ಸಂದರ್ಭದಲ್ಲಿ ಚುನಾವಣಾ ಆಯುಕ್ತರು ರಾಜೀನಾಮೆ ನೀಡಿದ್ದಾರೆ
ಅರುಣ್ ಗೋಯಲ್ ಅಧಿಕಾರಾವಧಿ 2027ರವರೆಗೆ ಇತ್ತು. ಸದ್ಯ ಗೋಯಲ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗೀಕರಿಸಿದ್ದಾರೆ. ಹೀಗಾಗಿ ಗೋಯಲ್ ಅವರ ರಾಜೀನಾಮೆಯಿಂದಾಗಿ ಇದೀಗ ಚುನಾವಣಾ ಸಮಿತಿಯಲ್ಲಿ ಎರಡು ಚುನಾವಣಾ ಆಯುಕ್ತ ಸ್ಥಾನಗಳು ಖಾಲಿಯಾಗಿವೆ. ಇದೀಗ ಚುನಾವಣಾ ವ್ಯವಸ್ಥೆಯ ಸಂಪೂರ್ಣ ಜವಾಬ್ದಾರಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರ ಹೆಗಲ ಮೇಲೆ ಬಿದ್ದಿದೆ. ಅರುಣ್ ಗೋಯಲ್ ಅವರು ಮುಖ್ಯ ಚುನಾವಣಾ ಆಯುಕ್ತರೊಂದಿಗೆ ಚುನಾವಣಾ ತಯಾರಿಗಾಗಿ ಹಲವು ರಾಜ್ಯಗಳಿಗೆ ಭೇಟಿ ನೀಡಿದ್ದರು. ಇದೀಗ ದಿಢೀರನೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ
ಮುಂದಿನ ವಾರ ಲೋಕಸಭಾ ಚುನಾವಣೆ ದಿನಾಂಕವನ್ನು ಘೋಷಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಆದರೆ ಗೋಯಲ್ ಅವರ ರಾಜೀನಾಮೆಯಿಂದ ಚುನಾವಣಾ ದಿನಾಂಕ ಘೋಷಣೆ ಮತ್ತಷ್ಟು ಮುಂದೆ ಹೋಗಬಹುದು ಎಂದು ವರದಿ ಆಗಿದೆ.