ಮಂಡ್ಯ: ತನ್ನ ಹೆಗಲ ಮೇಲೆ ಕೈ ಇಟ್ಟರು ಎಂಬ ಕಾರಣಕ್ಕೆ ಸ್ವಪಕ್ಷದ ಕಾರ್ಯಕರ್ತನಿಗೆ ಡಿ.ಕೆ.ಶಿವಕುಮಾರ್ ಕಾಪಾಳಮೋಕ್ಷ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಈ ನಡೆ ಭಾರೀ ವೈರಲ್ ಆಗಿದ್ದು ಇದು ಇದೀಗ ಬಿಜೆಪಿಗರಿಗೆ ಕಾಂಗ್ರೆಸ್ ನ್ನು ಟೀಕಿಸಲು ಬಂಡವಾಳ ಸಿಕ್ಕಿದಂತಾಗಿದೆ.
ಡಿಕೆಶಿ, ಅನಾರೋಗ್ಯಕ್ಕೆ ಒಳಗಾಗಿರುವ ಮಾಜಿ ಸಂಸದ ಜಿ.ಮಾದೇಗೌಡ ಅವರ ಆರೋಗ್ಯ ವಿಚಾರಿಸಲು ಶುಕ್ರವಾರ ಸಂಜೆ ಭಾರತೀನಗರಕ್ಕೆ ಬಂದ ಸಂದರ್ಭದಲ್ಲಿ ಘಟನೆ ನಡೆದಿದೆ. ಹಿಂದಿನಿಂದ ಬಂದ ಕಾರ್ಯಕರ್ತ ಅಣ್ಣಾ ಎನ್ನುತ್ತಾ ಡಿಕೆಶಿ ಹೆಗಲ ಮೇಲೆ ಕೈ ಇಟ್ಟಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅವರು ಕಾರ್ಯಕರ್ತನ ತಲೆಗೆ ಬಾರಿಸಿದ್ದಾರೆ. ಘಟನೆಯಿಂದ ಅಲ್ಲಿ ಇದ್ದವರೆಲ್ಲರೂ ತಬ್ಬಿಬ್ಬಾಗಿದ್ದಾರೆ. ಜೊತೆಗಿರುವ ಕಾರ್ಯಕರ್ತನಿಗೆ ಹಲ್ಲೆ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸುದ್ದಿ ತಿಳಿದ ರಾಜ್ಯ ಬಿಜೆಪಿ ಡಿಕೆಶಿ ಅವರೇ ನೀವು ರಾಜಕಾರಣಿಯೋ, ರೌಡಿಯೋ ಎಂದು ಪ್ರಶ್ನಿಸಿ ಟೀಕೆಯ ಸುರಿಮಳೆ ಆರಂಭಿಸಿದೆ.