ಸಮಗ್ರ ನ್ಯೂಸ್: ಹಣಕಾಸು ಸಂಸ್ಥೆಗಳು ಹಾಗೂ ಆರ್ಥಿಕ ವಹಿವಾಟಿಗೆ ಸಂಬಂಧಿಸಿದಂತೆ ಕ್ರಮಕೈಗೊಳ್ಳುವ ಅವಕಾಶ ಇರುವ ಭಾರತೀಯ ರಿಸರ್ವ್ ಬ್ಯಾಂಕ್ ಇಂದು ತಕ್ಷಣದಿಂದಲೇ ಜಾರಿಗೆ ಬರುವಂಥ ಮಹತ್ವದ ನಿರ್ದೇಶನವೊಂದನ್ನು ನೀಡಿದೆ.
ಪ್ರಮುಖವಾಗಿ ಸಾಲ ಮಂಜೂರು ಮತ್ತು ಸಾಲ ವಿತರಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಆರ್ಬಿಐ ಈ ನಿರ್ದೇಶನವನ್ನು ನೀಡಿದೆ. ಆರ್ಥಿಕ ವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ಬಜಾಜ್ ಫೈನಾನ್ಸ್ ಲಿ. ಕಂಪನಿಗೆ ಆರ್ಬಿಐ ಈ ನಿರ್ದೇಶನ ನೀಡಿದೆ.
ಕಂಪನಿಯು ತನ್ನ ಎರಡು ಸಾಲ ಯೋಜನೆಗಳಾದ ಇಕಾಮ್ ಮತ್ತು ಇನ್ಸ್ಟಾ ಇಎಂಐ ಕಾರ್ಡ್ ಅನ್ವಯ ಯಾವುದೇ ಸಾಲ ಮಂಜೂರು ಮತ್ತು ಸಾಲ ವಿತರಣೆ ಮಾಡಬಾರದು. ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಸೂಚನೆಯನ್ನು ಪಾಲಿಸಬೇಕು ಎಂದು ಬಜಾಜ್ ಫೈನಾನ್ಸ್ ಲಿಮಿಟೆಡ್ಗೆ ಆರ್ಬಿಐ ತಿಳಿಸಿದೆ. ಡಿಜಿಟಲ್ ಸಾಲ ನೀಡುವುದಕ್ಕೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗಸೂಚಿಗಳ ನಿಬಂಧನೆಗಳನ್ನು ಕಂಪನಿಯು ಅನುಸರಿಸದಿರುವ ಹಿನ್ನೆಲೆಯಲ್ಲಿ ಆರ್ಬಿಐ ಈ ಕ್ರಮಕೈಗೊಂಡಿದೆ. ಅದರಲ್ಲೂ ವಿಶೇಷವಾಗಿ ಈ ಎರಡು ಸಾಲ ನೀಡುವ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಕೆಲವು ಲೋಪಗಳು ಇರುವುದರಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದು ಆರ್ಬಿಐ ತಿಳಿಸಿದೆ.