ಸಮಗ್ರ ನ್ಯೂಸ್: ಪ್ಲೈವುಡ್ ತುಂಬಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಹೊರಟ್ಟಿ ಎಂಬ ಗ್ರಾಮದಲ್ಲಿ ರಾತ್ರಿ 1ಗಂಟೆ ಸುಮಾರಿಗೆ (ಸೆ. 17) ನಡೆದಿದೆ.
ಮೂಡಿಗೆರೆಯ ಸಾಮಿಲ್ ನಲ್ಲಿ ಪ್ಲೇವುಡ್ ತುಂಬಿಕೊಂಡು ಮಹಾರಾಷ್ಟ್ರಕ್ಕೆ ಹೋಗುತ್ತಿದ್ದ ಹತ್ತು ಚಕ್ರದ ಲಾರಿ ಮೂಡಿಗೆರೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಪಲ್ಟಿಯಾಗಿದೆ. ಚಾಲಕ ಅತಿಯಾದ ವೇಗದಲ್ಲಿ ಇದ್ದ ಕಾರಣ ಲಾರಿ ನಿಯಂತ್ರಣಕ್ಕೆ ಸಿಗದೆ ಪಲ್ಟಿಯಾಗಿದೆ. ಲಾರಿಯ ಚಾಲಕ ಹಾಗೂ ಕ್ಲೀನರ್ ಗೆ ಗಾಯಗಳಾಗಿದ್ದು, ಅವರನ್ನು ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೆ. 17ರಂದು ರಾತ್ರಿ 1ಗಂಟೆ ಸುಮಾರಿಗೆ ಈ ಅನಾಹುತ ಸಂಭವಿಸಿದ್ದು, ಸುಮಾರು ಎರಡು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗಿತ್ತು. ವೀಕ್ ಎಂಡ್ ಹಾಗೂ ಹಬ್ಬದ ರಜೆ ಹಾಗೂ ಚಿಕ್ಕಮಗಳೂರು, ಮೂಡಿಗೆರೆಯಿಂದ ಉಡುಪಿ- ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಆಗಿರುವುದರಿಂದ ವಾಹನಗಳು ಅತೀ ವೇಗವಾಗಿ ಓಡಾಡುತ್ತಿರುತ್ತದೆ. ಹಾಗಾಗಿ, ಯಾವುದೇ ಅನಾಹುತ ಸಂಭವಿಸಬಾರದೆಂದು ರಾತ್ರಿ 1 ಗಂಟೆಗೆ ಸ್ಥಳಕ್ಕೆ ಬಂದ ಬಣಕಲ್ ಪೊಲೀಸರು ಇಡೀ ರಾತ್ರಿ ಸ್ಥಳದಲ್ಲೇ ಕಾವಲಿದ್ದು ಯಾವುದೇ ಅನಾಹುತ ಸಂಭವಿಸದಂತೆ ಎಚ್ಚರ ವಹಿಸಿದ್ದಾರೆ. ಇಡೀ ರಾತ್ರಿ ಸ್ಥಳದಲ್ಲಿ ಕಾವಲಿದ್ದ ಪೊಲೀಸರು ಬೆಳಗ್ಗೆ ಜೆಸಿಬಿ ತರಿಸಿ ಲಾರಿಯನ್ನು ಬದಿಗೆ ಸರಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಬಣಕಲ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.