ಸಮಗ್ರ ನ್ಯೂಸ್: ನಿನ್ನೆ(ಮೇ.31) ದೇಶದ ಬಿಹಾರ, ಕರ್ನಾಟಕ, ಕೇರಳ ಮೂರು ರಾಜ್ಯಗಳಲ್ಲಿ ಏಕಕಾಲದಲ್ಲಿ ಎನ್ಐಎ(NIA) ದಾಳಿ ಮಾಡಿತ್ತು. ಮೂರು ರಾಜ್ಯಗಳ 85 ಕಡೆ ದಾಳಿ ನಡೆಸಿದ್ದ ಎನ್ಐಎತಂಡ, ಕರ್ನಾಟಕದ ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಯಲ್ಲಿ 25 ಕಡೆ ದಾಳಿ ಮಾಡಿದ್ದು, ಕೇರಳ ರಾಜ್ಯದ ಕಾಸರಗೋಡು, ಮಲ್ಲಾಪುರಂ, ಕೋಝಿಕೊಡ್, ತಿರುವನಂತಪುರಂನಲ್ಲಿ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿ, ಪರಿಶೀಲನೆ ನಡೆಸಿತ್ತು. ಈ ವೇಳೆ 17,50,100 ಲಕ್ಷ ನಗದು ಜಪ್ತಿ ಮಾಡಲಾಗಿದೆ. ಇಂದು(ಜೂ.1) ಕೂಡ ಕೆಲವೆಡೆ ದಾಳಿ ಮುಂದುವರಿಸಿದೆ ಎಂದು ರಾಷ್ಟ್ರೀಯ ತನಿಖಾ ದಳದಿಂದ ಅಧಿಕೃತ ಮಾಹಿತಿ ಟಿವಿ9ಗೆ ಲಭ್ಯವಾಗಿದೆ.
ಮೇ31ರ ನಿನ್ನೆ ಬೆಳ್ಳಂಬೆಳಿಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ದಾಳಿ ಮಾಡಿದ್ದರು. ಬಿಹಾರದಲ್ಲಿ ನಡೆದಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ವೇಳೆ ದುಷ್ಕೃತ್ಯಕ್ಕೆ ನಡೆಸಲು ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ, ಬೆಳ್ತಂಗಡಿ, ಉಪ್ಪಿನಂಗಡಿ, ವೇಣೂರು ಸೇರಿದಂತೆ 16 ಕಡೆ ಹಲವರ ಮನೆ, ಕಚೇರಿಗಳು, ಆಸ್ಪತ್ರೆ ಮೇಲೆ ದಾಳಿಮಾಡಿ ಪರಿಶೀಲನೆ ನಡೆಸಿದ್ದರು. ಕಳೆದ ವರ್ಷ 2022ರ ಜುಲೈ ತಿಂಗಳಲ್ಲಿ ಬಿಹಾರದ ಪಾಟ್ನಾದಲ್ಲಿ ನಡೆದಿದ್ದ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಉಗ್ರರು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಅಂಶ ಬಹಿರಂಗವಾಗಿತ್ತು. ಈ ಪ್ರಕರಣದ ತನಿಖೆ ನಡೆಸುತ್ತಿರುವ ಐಎನ್ಎ ಅಧಿಕಾರಿಗಳು ಫುಲ್ವಾರಿ ಶರೀಫ್ ಎಂಬುವವನನ್ನು ಬಂಧಿಸಿದ್ದರು.
ಇನ್ನು ಈ ಕಾರ್ಯಕ್ರಮವನ್ನು ವಿಫಲಗೊಳಿಸಲು ಸಂಚು ನಡೆಸಲು ದಕ್ಷಿಣ ಕನ್ನಡದಿಂದ ಹಣಕಾಸು ನೆರವು ನೀಡಲಾಗಿದೆ ಎಂಬ ಸತ್ಯ ತನಿಖೆ ವೇಳೆ ಬಹಿರಂಗವಾಗಿತ್ತು. ಈ ಹಣದ ಜಾಡು ಹಿಡಿದು ಹೊರಟ ಅಧಿಕಾರಿಗಳಿಗೆ ಗಲ್ಫ್ ರಾಷ್ಟ್ರಗಳಿಂದ ಹವಾಲಾ ಮೂಲಕ ಭಾರತಕ್ಕೆ ಹಣ ಬರುತ್ತಿದ್ದು, ಇದನ್ನು ಭಾರತದಲ್ಲಿ ಭಯೋತ್ಪಾದಕ ಎಸಗಲು ಬಳಸಲಾಗುತ್ತಿದೆ ಎಂಬ ಅಂಶವನ್ನು ಪತ್ತೆ ಹಚ್ಚಿದ್ದರು. ಈ ಹಿನ್ನಲೆ ರಾಜ್ಯದ ಒಟ್ಟು 25 ಕಡೆಗಳಲ್ಲಿ ದಾಳಿ ಮಾಡಿದ್ದರು.