ಸಮಗ್ರ ನ್ಯೂಸ್: ರಾಜ್ಯದಲ್ಲಿ ಮುಂಗಾರಿಗೂ ಮುನ್ನವೇ ವರುಣನ ಅಬ್ಬರ ಜೋರಾಗಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಇನ್ನೂ 3 ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಚಾಮರಾಜನಗರ, ತುಮಕೂರು, ಮಂಡ್ಯ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ರಾಮನಗರ ಜಿಲ್ಲೆಗಳಲ್ಲಿ ಜೂನ್ 2ರವರೆಗೂ ಅಧಿಕ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮೇ. 30 ರಿಂದ ಜೂನ್ 1 ರವರೆಗೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು, ಮಂಡ್ಯ, ರಾಮನಗರ, ಚಾಮರಾಜನಗರ ಜಿಲ್ಲೆಗಳಿಗೆ ಮೇ 31 ಹಾಗೂ ಜೂನ್ 1 ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನು ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ದಕ್ಚಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಸೋಮವಾರ ಮಳೆ ಹಾಗೂ ಸಿಡಿಲಿನ ಆರ್ಭಟಕ್ಕೆ ಶಿವಮೊಗ್ಗ ನಗರದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ಸಿಡಿಲು ಬಡಿದು 27 ವರ್ಷದ ಲಕ್ಷ್ಮೀಬಾಯಿ ಮೃತಪಟ್ಟಿದ್ದಾರೆ. ಕುರಿಗಳಿಗೆ ಮೇವು ತರಲು ಹೋಗಿದ್ದ ವೇಳೆ ಅವರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ಬಳ್ಳಾರಿ ತಾಲೂಕಿನ ಕುಂಟನಹಾಳ ಗ್ರಾಮದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ರೈತ ಪಂಪಣ್ಣ ಮೃತಪಟ್ಟಿದ್ದಾರೆ. ಕಲಬುರ್ಗಿ ಜಿಲ್ಲೆಯ ತಾಲೂಕಿನ ರೇವೂರ ಬಿ ಗ್ರಾಮದ ನಸುರುದ್ದೀನ್ ದರ್ಗಾ ಜಮೀನಿನಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ರೈತ ಮಾಳಪ್ಪ ದತ್ತಪ್ಪ ಪೂಜಾರಿ(32) ಸಾವನ್ನಪ್ಪಿದ್ದಾರೆ.
ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಕಿರಿಶ್ಯಾಳ ಗ್ರಾಮದಲ್ಲಿ ಸಿಡಿಲು ಬಡಿದು ರೈತ ದ್ಯಾಮಣ್ಣ ಸಿದ್ದಪ್ಪ ಸೆರೆಕಾರ(20) ಸಾವನ್ನಪ್ಪಿದ್ದಾರೆ.