ಸಮಗ್ರ ನ್ಯೂಸ್: ಮಯನ್ಮಾರ್ ಸೇನಾ ಪಡೆ ಹಠಾತ್ ಏರ್ ಸ್ಟ್ರೈಕ್ ನಡೆಸಿದ ಪರಿಣಾಮ ಮಹಿಳೆಯರು, ಮಕ್ಕಳು ಸೇರಿದಂತೆ 100 ಜನರು ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಮಯನ್ಮಾರ್ ಸೇನಾ ಪಡೆ ಮುಖ್ಯಸ್ಥ ಜನರಲ್ ಮಿನ್ ಆಂಗ್ ಹ್ಲೈಂಗ್ ತಿಳಿಸಿದ್ದಾರೆ. ಸಾಗಯಿಂಗ್ ಪ್ರದೇಶದ ಕಾನ್ಬಾಲು ನಗರದ ಪಜಿಗಿ ಗ್ರಾಮದ ಹೊರಗೆ ಈ ದಾಳಿ ನಡೆದಿದೆ.
ಕಾನ್ಬಾಳು ನಗರದ ಪಜಿಗಿ ಗ್ರಾಮದ ಹೊರಗೆ ಮಯನ್ಮಾರ್ ವಿರೋಧಿ ಬಣ ಪ್ರತ್ಯೇಕ ಕಚೇರಿ ತೆರೆಯಲು ಪ್ರಾರಂಭಿಸಿತ್ತು. ಇದಕ್ಕಾಗಿ ನಿನ್ನೆ ಅದ್ಧೂರಿ ಸಮಾರಂಭ ಏರ್ಪಡಿಸಿದ್ದರಿಂದ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು. ಈ ಬಗ್ಗೆ ನಿಖರ ಮಾಹಿತಿ ಪಡೆದ ಮಯನ್ಮಾರ್ ಸೇನಾಪಡೆ ವೈಮಾನಿಕ ದಾಳಿ ನಡೆಸಿದೆ. ಪರಿಣಾಮ ಮಹಿಳೆಯರು, 30ಕ್ಕೂ ಹೆಚ್ಚು ಮಕ್ಕಳು ಸೇರಿ 100 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿಸಲಾಗಿದೆ.
ಕಾರ್ಯಕ್ರಮ ನಡೆಯುತ್ತಿದ್ದ ಪ್ರದೇಶದ ಮೇಲೆ ನಿನ್ನೆ ಬೆಳಗ್ಗೆ 8 ಗಂಟೆ ಸುಮಾರಿಗೆ ಸೇನಾ ವಿಮಾನ ಬಾಂಬ್ಗಳನ್ನು ಹಾಕಿದೆ. ಮಾಹಿತಿ ಪ್ರಕಾರ ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಜನರಿದ್ದರು ಎನ್ನಲಾಗಿದೆ. ಆದರೆ ಮೃತಪಟ್ಟವರು 100 ಮಂದಿ ಎಂದು ಹೇಳಲಾಗುತ್ತಿದೆ. ಈ ದಾಳಿಯನ್ನು ವಿಶ್ವಸಂಸ್ಥೆಯು ತೀವ್ರವಾಗಿ ಖಂಡಿಸಿದ್ದು ಹಿಂಸಾಚಾರವನ್ನು ನಿಲ್ಲಿಸುವಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.