ಸಮಗ್ರ ನ್ಯೂಸ್: ಇತ್ತೀಚೆಗೆ ನವ ದಂಪತಿಯೊಂದು ಇನ್‌ಸ್ಟಾಗ್ರಾಂನಲ್ಲಿ ತಮ್ಮ ಫಸ್ಟ್ ನೈಟ್ ದಿನದ ವಿಡಿಯೋ ಶೇರ್ ಮಾಡಿ ನೆಟ್ಟಿಗರಿಂದ ಕ್ಲಾಸ್ ತೆಗೆದುಕೊಂಡಿತ್ತು.
ಇದೀಗ ಇಂತಹದ್ದೇ ಮತ್ತೊಂದು ವಿಚಿತ್ರ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ನವವಿವಾಹಿತ ಯುವಕನೊಬ್ಬ ತನ್ನ ಪತ್ನಿಯ ಜೊತೆಗಿನ ಮೊದಲ ರಾತ್ರಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲು ಹೋಗಿ ಜೈಲು ಸೇರಿದ್ದಾನೆ.
ಆಂಧ್ರ ಪ್ರದೇಶದ ಕೋನಸೀಮಾ ಜಿಲ್ಲೆಯ ಕಟ್ರೇನಿಕೋಣದಲ್ಲಿ ಈ ಘಟನೆ ನಡೆದಿದ್ದು, ತನ್ನ ಪತ್ನಿಯ ಒಪ್ಪಿಗೆ ಪಡೆಯದೆ ಆಕೆಯೊಂದಿಗೆ ರಾತ್ರಿ ಕಳೆದ ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ.
ಇನ್ನೊಂದು ಸಂಗತಿಯೆಂದರೆ ಆತ 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿದ್ದು, ಪೊಲೀಸರಿಗೆ ಈ ವಿಷಯ ತಿಳಿದ ನಂತರ ಎರಡೆರಡು ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.
ಪತ್ನಿಯ ಒಪ್ಪಿಗೆ ಪಡೆಯದೆ ಮೊದಲ ರಾತ್ರಿಯ ವಿಡಿಯೋ ಮತ್ತು ಫೋಟೋಗಳನ್ನು ಶೂಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಂತೆ ಅದು ತನ್ನ ಗ್ರಾಮದಲ್ಲಿ ಎಲ್ಲೆಡೆ ವೈರಲ್ ಆಗಿದೆ.
ಈ ವಿಷಯ ವಧುವಿನ ತಾಯಿಗೆ ತಿಳಿದಾಗ ಮೊದಲು ಆಕೆ ನಂಬಿರಲಿಲ್ಲ. ನಂತರ ಆಘಾತಕ್ಕೊಳಗಾದ ತಾಯಿ ತನ್ನ ಮಗಳ ಭವಿಷ್ಯವನ್ನು ಮುಗಿಸಿಬಿಟ್ಟ ಎಂದು ಅತ್ತಿದ್ದಾರೆ.
ನಂತರ ಮನೆಯವರು ನಿರ್ಧರಿಸಿ ಅಳಿಯನ ವಿರುದ್ಧ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.







