ಸಮಗ್ರ ನ್ಯೂಸ್: ಅಪ್ರಾಪ್ತ ಹಿಂದೂ ಬಾಲಕಿಯನ್ನು ಭೇಟಿಯಾಗಲು ಬಂದ ಮುಸ್ಲಿಂ ಹುಡುಗನಿಗೆ ಥಳಿಸಿರುವ ಪ್ರಕರಣ ತಿರುವು ಪಡೆದುಕೊಂಡಿದ್ದು, ಹಿಂದೂ ಸಂಘಟನೆಗಳ ಕಾರ್ಯಕರ್ತರು ಪೊಲೀಸರ ವಿರುದ್ಧವೇ ತಿರುಗಿಬಿದ್ದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಥಳಿತಕ್ಕೆ ಒಳಗಾದ ಮುಸ್ಲಿಂ ಹುಡುಗ ಹಾಗೂ ದೌರ್ಜನ್ಯಕ್ಕೆ ಒಳಗಾದ ಹಿಂದೂ ಹುಡುಗಿಯ ಕಡೆಯಿಂದಲೂ ದೂರು -ಪ್ರತಿದೂರು ದಾಖಲಾಗಿದೆ.
ಇಂದು (ಜ.7) ಬೆಳಗ್ಗೆ ೧೦ಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯೆದುರು ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಹಿಂದೂ ಕಾರ್ಯಕರ್ತರನ್ನೇ ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಠಾಣೆ ಎದುರು ಪ್ರತಿಭಟನೆಗೆ ತಯಾರಿ ನಡೆಸಿಕೊಂಡಿದ್ದಾರೆ.
ಈ ಹಿಂದೆ ಸುಬ್ರಹ್ಮಣ್ಯ ಜಾತ್ರೋತ್ಸವ ಸಂದರ್ಭದಲ್ಲಿ ಆದ ಘಟನೆ ಹಾಗೂ ಇದೀಗ ಸುಬ್ರಹ್ಮಣ್ಯದಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯ ಜತೆಗಿದ್ದ ಮುಸ್ಲಿಂ ಯುವಕನಿಗೆ ಥಳಿಸಿದ ಪ್ರಕರಣದಲ್ಲಿ ಪೊಲೀಸರು ಅಮಾಯಕ ಹಿಂದೂ ಯುವಕರನ್ನೇ ಬಂಧಿಸಿ ಮಾನಸಿಕ ಕಿರಿಕಿರಿ ನಡೆಸಿದ್ದಾರೆ. ಪೊಲೀಸರು ಟಾರ್ಗೆಟ್ ಮಾಡಿ ಹಿಂದೂ ಕಾರ್ಯಕರ್ತರ ಮೇಲೆ ಕೇಸು ದಾಖಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಎದುರು ಪ್ರತಿಭಟನಾ ಸಭೆ ನಡೆಯಲಿದೆ.
ಪ್ರಕರಣದಲ್ಲಿ ಇಲ್ಲದ ವ್ಯಕ್ತಿಗಳ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ಹಿಂದೂ ಯುವಕರನ್ನೇ ಸುಬ್ರಹ್ಮಣ್ಯ ಠಾಣಾ ಪೊಲೀಸರು ಟಾರ್ಗೆಟ್ ಮಾಡುತ್ತಿರುವುದು ಮತ್ತು ಪೊಲೀಸರ ಇಬ್ಬಂದಿತನ ಪ್ರಶ್ನಿಸಿ ಹಿಂಜಾವೇ ಮತ್ತು ಇನ್ನಿತರ ಸಂಘ ಪರಿವಾರದ ಕಾರ್ಯಕರ್ತರು ಪ್ರತಿಭಟನೆಗೆ ತೀರ್ಮಾನಿಸಿದ್ದು, ಪ್ರಕರಣ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.
ಯುವಕನಿಂದ ದೂರು ದಾಖಲು – ದೂರಿನಲ್ಲಿ ಏನಿದೆ?
ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕಲ್ಲುಗುಂಡಿ ನಿವಾಸಿ ಅಫೀದ್ ದೂರು ನೀಡಿದ್ದಾನೆ. ನನ್ನ ಮೇಲೆ 10 ರಿಂದ 12 ಜನ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ್ದಾಗಿ ದೂರು ನೀಡಿದ್ದಾನೆ. ಒಂದು ವರ್ಷದ ಹಿಂದೆ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಕಡಬ ತಾಲೂಕು ಕುಕ್ಕೇ ಸುಬ್ರಹ್ಮಣ್ಯದ ವಿದ್ಯಾರ್ಥಿನಿಯ ಪರಿಚಯವಾಗಿ, ಆಕೆಯನ್ನು ನೋಡಲು ಈ ಹಿಂದೆ 2-3 ಸಲ ಸುಬ್ರಹ್ಮಣ್ಯದ ಕೆಎಸ್ ಆರ್ ಟಿಸಿ ಬಸ್ಸು ನಿಲ್ದಾಣಕ್ಕೆ ಹೋಗಿ ಅವಳನ್ನು ಮಾತನಾಡಿಸಿಕೊಂಡು ಬರುತ್ತಿದ್ದು, ಅದರಂತೆ ಈ ದಿನ ದಿನಾಂಕ:05-01-2023 ರಂದು ಸುಬ್ರಹ್ಮಣ್ಯಕ್ಕೆ KSTRC ನಿಲ್ದಾಣಕ್ಕೆ ಬಂದಿದ್ದಾನೆ.
ವಿದ್ಯಾರ್ಥಿನಿ ಕಾಲೇಜಿನಿಂದ ಬಸ್ಸು ನಿಲ್ದಾಣಕ್ಕೆ ಬಂದಾಗ ಅವಳಿಗೆ ಚಾಕಲೇಟ್ ನ್ನು ಕೊಡುತ್ತಿದ್ದಾಗ ಯಾರೋ ಪರಿಚಯವಿಲ್ಲದ 2-3 ಜನರು ಬಂದು ಯುವಕನ್ನು ಬಲಾತ್ಕಾರವಾಗಿ ಎಳೆದುಕೊಂಡು ಅಲ್ಲೇ ರಸ್ತೆಬದಿಯಲ್ಲಿ ಬಂದು ನಿಂತಿದ್ದ ಜೀಪೊಂದರಲ್ಲಿ ಹಾಕಿ ಒಯ್ದು ಸುಬ್ರಹ್ಮಣ್ಯ ಗ್ರಾಮದ ಕುಮಾರಧಾರ ಜಂಕ್ಷನ್ ಹತ್ತಿರವಿರುವ ಹಳೇ ಕಟ್ಟಡದ ಕೊಣೆಯೊಳಗೆ ಕೂಡಿ ಹಾಕಿ ಸುಮಾರು 10-12 ಜನರು ಕೈಯಲ್ಲಿ ಮರದ ದೊಣ್ಣೆ ಮತ್ತು ಬೆತ್ತಗಳಿಂದ ತಲೆ, ಎರಡೂ ಕೈಕಾಲುಗಳಿಗೆ, ಭುಜಗಳಿಗೆ, ಬೆನ್ನು ಹಾಗೂ ದೇಹದ ಇತರ ಭಾಗಗಳಿಗೆ ಹೊಡೆದಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕೊಲ್ಲುವ ಉದ್ದೇಶದಿಂದ ಒಬ್ಬನು ಚಾಕುವಿನಿಂದ ತಿವಿಯಲು ಪ್ರಯತ್ನಿಸಿದಾಗ ಉಳಿದವರು ಅವನ್ನನ್ನು ತಡೆದು “ಇನ್ನು ಮುಂದೆ, ನಮ್ಮ ಹುಡುಗಿಯರ ತಂಟೆಗೆ ಬಂದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ,” ಎಂದು ಬೈದು ಬೆದರಿಕೆಯೊಡ್ಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಯುವತಿಯ ಪೋಷಕರಿಂದ ಮತ್ತೊಂದು ದೂರು ದಾಖಲು..!
ಕಾಲೇಜ್ ಬಿಟ್ಟು ಮನೆಗೆ ಹಿಂತಿರುಗಲು ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿರುವ ಸಂದರ್ಭದಲ್ಲಿ ಹಪೀದ್ ಎಂಬಾತನು ವಿದ್ಯಾರ್ಥಿನಿಯನ್ನು ಪ್ರೀತಿಸುವಂತೆ ಒತ್ತಡ ಹಾಕಿ ,ಮಗಳ ದೂರವಾಣಿ ಸಂಖ್ಯೆಯನ್ನು ಕೇಳಿದಾಗ ಅದಕ್ಕೆ ಅವಳು ನಿರಾಕರಿಸಿದ್ದು ಆಗ ಅವಳ ಕೈ ಹಿಡಿದು ಎಳೆದು ಮಾನಭಂಗಕ್ಕೆ ಯತ್ನಿಸಿ ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆಗ ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಬಂದಿದ್ದು ವಿದ್ಯಾರ್ಥಿನಿ ವಿಚಲಿತಳಾದವಳನ್ನು ಕಂಡು ವಿಚಾರಿಸಿದಾಗ ಭಯಗೊಂಡು ತಡವಾಗಿ ಈ ಬಗ್ಗೆ ತಿಳಿಸಿರುತ್ತಾಳೆ. ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನು ಪ್ರೀತಿಸುವಂತೆ ಒತ್ತಡ ಹಾಕಿ, ಕೈ ಹಿಡಿದು ಮಾನಭಂಗಕ್ಕೆ ಯತ್ನಿಸಿ ಬೆದರಿಕೆ ಹಾಕಿರುವ ಆರೋಪಿ ಹಫೀದನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.