ನವದೆಹಲಿ: ದಿಲ್ಲಿ ರಾಜ್ಯ ಸರಕಾರದ ಮನೆಬಾಗಿಲಿಗೆ ಪಡಿತರ ತಲುಪಿಸುವ ಮಹತ್ತರ ಯೋಜನೆಗೆ ಕೇಂದ್ರ ಸರ್ಕಾರ ತಡೆಹಿಡಿದಿದೆ. ಕೇಂದ್ರ ಸರ್ಕಾರದ ಈ ನಡೆಗೆ ತೀವ್ರ ಆಕ್ರೋಶ ಹೊರಹಾಕಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಕೇಂದ್ರ ಸರ್ಕಾರ ಸಂಪೂರ್ಣವಾಗಿ ರೇಷನ್ ಮಾಫಿಯಾದ ಪ್ರಭಾವಕ್ಕೊಳಗಾಗಿದೆ ಎಂದಿದ್ದಾರೆ.
ರೇಷನ್ ಅಂಗಡಿಗಳಲ್ಲಿ ಜನ ಸೇರುವ ಕಾರಣ ಕೋವಿಡ್ ವ್ಯಾಪಕವಾಗಿ ಹರಡುತ್ತಿದೆ. ಅದನ್ನು ಹೋಗಲಾಡಿಸಲು ಮನೆಮನೆಗೆ ರೇಷನ್ ತಲುಪಿಸಿದರೆ ಒಳಿತು ಎಂದು ರಾಜ್ಯ ಸರ್ಕಾರ ತೀರ್ಮಾನಿಸಿ ಇನ್ನೆರಡು ದಿನಗಳಲ್ಲಿ ಯೋಜನೆಯ ಅನುಷ್ಠಾನಕ್ಕೆ ಕೈ ಹಾಕಿತ್ತು. ಈ ನಡುವೆ ಕೇಂದ್ರ ಸರ್ಕಾರದ ಅನುಮತಿ ಪಡೆಯಲಿಲ್ಲ ಎಂದು ಆರೋಪಿಸಿ ದಿಲ್ಲಿ ಸರಕಾರದ ಈ ಕ್ರಾಂತಿಕಾರಿ ಯೋಜನೆಯನ್ನು ತಡೆಹಿಡಿಯಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ, ಯೋಜನೆಯೊಂದರ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ ಕೇಂದ್ರದ ಅನುಮತಿ ಪಡೆಯುವ ಅಗತ್ಯವಿರಲಿಲ್ಲ. ಆದರೂ ಒಂದೆರಡು ಬಾರಿಯಲ್ಲ, ಐದು ಬಾರಿ ಕೇಂದ್ರದ ಅನುಮತಿ ಪಡೆಯಲಾಗಿದೆ. ಕೇಂದ್ರ ಸರ್ಕಾರ ಸಂಪೂರ್ಣವಾಗಿ ರೇಷನ್ ಮಾಫಿಯಾ ಪ್ರಭಾವಕ್ಕೊಳಗಾಗಿದೆ. ಪಿಜ್ಜಾ, ಬರ್ಗರ್, ಸ್ಮಾರ್ಟ್ಫೋನ್ ಇತ್ಯಾದಿಗಳು ಮನೆ ಬಾಗಿಲಿಗೆ ತಲುಪುತ್ತಿರುವ ಈ ಕಾಲಘಟ್ಟದಲ್ಲಿ ಅತಿ ಅಗತ್ಯ ಅಕ್ಕಿ ಸಾಮಾನುಗಳು ತಲುಪಿದರೆ ಅದು ಹಾಳೇ..? ಎಂದು ಪ್ರಶ್ನಿಸಿದ್ದಾರೆ.







