ಸಮಗ್ರ ನ್ಯೂಸ್: ರಿಲೀಸ್ ಆಗುವ ಪ್ರತಿ ಸಿನಿಮಾ ಕೂಡ ಪ್ರೇಕ್ಷಕರ ಮನಗೆಲ್ಲೋದು ಕಷ್ಟ. ಆದರೆ ಕಂಟೆಂಟ್ ಇದ್ದರೆ ಎಂತಹದ್ದೇ ಚಿತ್ರವಾದ್ರೂ ಸದ್ದು ಮಾಡುತ್ತೆ. ಸದ್ಯ ‘ಸದ್ದು ವಿಚಾರಣೆ ನಡೆಯುತ್ತಿದೆ’ ಎಂಬ ಸಿನಿಮಾ ಕಳೆದ ಶುಕ್ರವಾರ ತೆರೆಕಂಡಿದ್ದು, ಒಳ್ಳೆಯ ಕಥೆ, ಚಿತ್ರಕಥೆ, ಪಾತ್ರಗಳು ಹಾಗೂ ಮೇಕಿಂಗ್ನಿಂದ ಎಲ್ಲರ ಗಮನ ಸೆಳೆದಿದೆ. ಕಾಂತಾರ ಬಳಿಕ ಕನ್ನಡದ ಈ ಸಿನಿಮಾ, IMDbಯಲ್ಲಿ 9.8 ರೇಟಿಂಗ್ ಪಡೆದಿದೆ.
ಪ್ರತಿಷ್ಠಿತ IMDb ಸಿಕ್ಕ ಸಿಕ್ಕವ್ರಿಗೆಲ್ಲಾ ಹೀಗೆ ರೇಟಿಂಗ್ ಕೊಡುವ ವೆಬ್ಸೈಟ್ ಅಲ್ಲ. ತುಂಬಾ ಕ್ಲಿಯರ್ ಆಗಿ ರಿವ್ಯೂ ಮಾಡೋ ವೆಬ್ಸೈಟ್ ಹೀಗೆ ಟಾಪ್ ರೇಟಿಂಗ್ ನೀಡಿ, ಸಿನಿಮಾವನ್ನು ಉತ್ತೇಜಿಸಿರೋದು ಖುಷಿಯ ವಿಚಾರ. ಭಾಸ್ಕರ್ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ಪೊಲೀಸ್ ಆಫೀಸರ್ಗಳ ಏಳು ಬೀಳಿನ ಕಥೆಯನ್ನು ಹೇಳುವ ಪ್ರಯತ್ನ ಮಾಡಿದ್ದಾರೆ.
ಲೀಡ್ನಲ್ಲಿ ರಾಕೇಶ್ ಮಯ್ಯ ಹಾಗೂ ಪಾವನಾ ಗೌಡ ಬಣ್ಣ ಹಚ್ಚಿದ್ದು, ಇವರೊಟ್ಟಿಗೆ ಬಹುಮುಖ್ಯ ಪಾತ್ರಕ್ಕೆ ಮಧು ನಂದನ್ ಬಣ್ಣ ಹಚ್ಚಿದ್ದಾರೆ. ಅಂದಹಾಗೆ ಮಧು ನಂದನ್ ವೃತ್ತಿಯಲ್ಲಿ ವೆಟರ್ನರಿ ಕಾಲೇಜ್ ಲೆಕ್ಚರರ್. ಆದ್ರೆ ಸಿನಿಮಾನ ಪ್ರವೃತ್ತಿಯಾಗಿಸಿಕೊಂಡಿರೋ ಇವ್ರು, ಈ ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಸಿನಿಮಾನ ಪ್ರೇಕ್ಷಕರಿಗೆ ಉಣಬಡಿಸೋ ಮಹತ್ವದ ಕಾರ್ಯಕ್ಕೆ ಕೈಹಾಕಿ, ನಟಿಸುವ ಜೊತೆ ನಿರ್ಮಾಣವನ್ನೂ ಮಾಡಿದ್ದಾರೆ.
ನಟ, ನಿರ್ದೇಶಕರಾಗಿ ತನ್ನದೇ ಆದ ಛಾಪು ಮೂಡಿಸಿರೋ ಆ್ಯಕ್ಟ್ 1978 ಚಿತ್ರದ ರಘು ಶಿವಮೊಗ್ಗ ಮೊದಲ ಬಾರಿಗೆ ನೆಗೆಟೀವ್ ರೋಲ್ನಲ್ಲಿ ಕಾಣಸಿಗಲಿದ್ದಾರೆ. ಅಚ್ಯುತ್ ಕುಮಾರ್ ಕೂಡ ಚಿತ್ರದಲ್ಲಿ ನಟಿಸಿದ್ದು, ಟ್ವಿಸ್ಟ್ ಅಂಡ್ ಟರ್ನ್ಸ್ನಿಂದ ಸಿನಿಮಾ ನೋಡುಗರಲ್ಲಿ ಸಖತ್ ಕ್ಯೂರಿಯಾಸಿಟಿ ಹುಟ್ಟಿಸುತ್ತೆ.
ಹೊಸಬರ ಈ ರೀತಿಯ ವಿನೂತನ ಪ್ರಯತ್ನಗಳು ಸದಾ ಗೆಲ್ಲಬೇಕು. ಯಾವುದೇ ಬ್ಯಾಗ್ರೌಂಡ್ ಅಥ್ವಾ ಗಾಡ್ಫಾದರ್ ಇಲ್ಲದೆ ಹೀಗೆ ಸಿನಿಮಾ ಮಾಡೋ ಮಹದಾಸೆ ಹೊತ್ತು ಬರೋ ಸಿನಿಮೋತ್ಸಾಹಿ ತಂಡವನ್ನ ಕನ್ನಡಿಗರು ಕೈಹಿಡಿಯಬೇಕಿದೆ. ಕೆಆರ್ಜಿ ಅಂತಹ ಬಿಗ್ ಬ್ಯಾನರ್ ಈ ಚಿತ್ರವನ್ನು ಡಿಸ್ಟ್ರಿಬ್ಯೂಟ್ ಮಾಡ್ತಿದ್ದು, ಸಿನಿಮಾ ನೋಡಿದ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಬರಹಗಳಿಂದ ಅವ್ರ ಆತ್ಮವಿಶ್ವಾಸ ಹೆಚ್ಚಿಸುತ್ತಿದ್ದಾರೆ.
ಇಷ್ಟ ಪಟ್ಟು ಸಿನಿಮಾ ಮಾಡಿರೋ ಮಧು ನಂದನ್ ತಂಡಕ್ಕೆ ಇದೀಗ ಸದ್ದು ವಿಚಾರಣೆ ನಡೆಯುತ್ತಿದೆ ಚಿತ್ರವನ್ನು ಥಿಯೇಟರ್ನಲ್ಲಿ ಉಳಿಸಿಕೊಳ್ಳೋದು ತುಂಬಾ ಕಷ್ಟವಾಗ್ತಿದೆ. ಕನ್ನಡಿಗರು ಒಳ್ಳೆಯ ಪ್ರಯತ್ನಗಳನ್ನ ಕೈಬಿಟ್ಟಿಲ್ಲ ಎನ್ನುವುದಕ್ಕೆ ಈ ಚಿತ್ರ ಮತ್ತೊಂದು ಸಾಕ್ಷಿಯಾಗಿದೆ.