ಸಮಗ್ರ ನ್ಯೂಸ್ : ಅಪರಿಚಿತ ಸ್ಕಾರ್ಪಿಯೋ ಕಾರೊಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ರವರ ಕಾರನ್ನು ಹಿಂಬಾಲಿಸಿ, ಅಡ್ಡಗಟ್ಟಿ ಆಯುಧ ತೋರಿಸಿ ಜೀವ ಬೆದರಿಕೆ ಒಡ್ಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಫರಂಗಿ ಪೇಟೆ ಎಂಬಲ್ಲಿ ಅ 13 ರಂದು ತಡ ರಾತ್ರಿ ನಡೆದಿದೆ. ಈ ಬಗ್ಗೆ ಹರೀಶ್ ಪೂಂಜಾರವರ ಕಾರು ಚಾಲಕ ನೀಡಿದ ದೂರಿನಂತೆ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರುವಾರ ಸಂಜೆ ಬೆಂಗಳೂರಿನಿಂದ ಮಂಗಳೂರು ವಿಮಾನ ನಿಲ್ಧಾಣಕ್ಕೆ ಬಂದಿಳಿದ, ಹರೀಶ್ ಪೂಂಜಾರವರು ಬೆಳ್ತಂಗಡಿಗೆ ಕಾರಿನಲ್ಲಿ ಹಿಂತಿರುಗಿ ಹೋಗುತ್ತಿದ್ದ ಸಂದರ್ಭ ಘಟನೆ ನಡೆದಿದೆ. ಮೊದಲು ಶಾಸಕರ ಕಾರನ್ನು ದುಷ್ಕರ್ಮಿಯು ಬಿಳಿ ಸ್ಕಾರ್ಪಿಯೋ ಕಾರಿನಲ್ಲಿ ಹಿಂಬಾಲಿಸಿದ್ದಾನೆ. ಶಾಸಕರಿದ್ದ ಕಾರು ಫರಂಗಿಪೇಟೆಯ ಮೀನು ಮಾರುಕಟ್ಟೆ ಬಳಿ ತಲುಪುತ್ತಲೇ, ದುಷ್ಕರ್ಮಿ ತನ್ನ ಕಾರನ್ನು ಅದಕ್ಕೆ ಅಡ್ಡ ನಿಲ್ಲಿಸಿ ಕಾರಿನಲ್ಲಿದ್ದವರಿಗೆ ಅವಾಚ್ಯ ಶಬ್ಧಗಳಿಂದ ಬೈದು ತನ್ನ ಕೈಯಲಿದ್ದ ಆಯುಧವನ್ನು ತೋರಿಸಿ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.
ರಾತ್ರಿ 11.15 ರ ಸುಮಾರಿಗೆ ಶಾಸಕರಿದ್ದ ಕಾರು ಫರಂಗಿಪೇಟೆ ಮೀನು ಮಾರ್ಕೆಟ್ ನ ಸ್ವಲ್ಪ ಮುಂದಕ್ಕೆ ತಲುಪುತ್ತಿದ್ದಂತೆ ಸ್ಕಾರ್ಪಿಯೋ ಕಾರಿನಲ್ಲಿದ್ದ ದುಷ್ಕರ್ಮಿ ಅಡ್ಡಗಟ್ಟಿದ್ದಾನೆ. ಬಳಿಕ ಆತ ಕಾರಿನಲ್ಲಿದ್ದ ಶಾಸಕ ಪೂಂಜಾ , ಅವರ ಸಂಬಂಧಿಕರಾದ ಪ್ರಶಾಂತ್ ಮತ್ತು ಕುಶಿತ್ ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ಧಗಳಿಂದ ಬೈದಿದ್ದಾನೆ.ಹಾಗೂ ತನ್ನ ಕೈಯಲಿದ್ದ ಆಯುಧ ತೋರಿಸಿ ಜೀವ ಬೆದರಿಕೆ ಒಡ್ಡಿದ್ದಾನೆ.
ಹೀಗಾಗಿ ಚಾಲಕ ರಕ್ಷಣೆಗೆ ಶಾಶಕ ಪೂಂಜಾರಿದ್ದ ಕಾರನ್ನು ಫರಂಗಿಪೇಟೆ ಹೊರ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಹೊರ ಠಾಣೆ ಮುಂಭಾಗ ಕಾರನ್ನು ನಿಲ್ಲಿಸುತ್ತಲೇ ಸ್ಕಾರ್ಪಿಯೋ ಕಾರು ಬಿಸಿರೋಡ್ ನತ್ತ ಪರಾರಿಯಾಗಿದೆ ಎನ್ನಲಾಗಿದೆ.