ಸಮಗ್ರ ನ್ಯೂಸ್: ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಎಸ್.ಎಂ.ಕೃಷ್ಣ ಅವರು ತೀವ್ರ ಜ್ವರ, ಶ್ವಾಸಕೋಶ ಇನ್ಫೆಕ್ಷನ್ನಿಂದ ಬಳಲುತ್ತಿದ್ದಾರೆ. ಮೊದಲು ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಶನಿವಾರ ರಾತ್ರಿ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಡಾ.ಸತ್ಯನಾರಾಯಣ್, ಡಾ.ಸುನೀಲ್ ಕಾರಂತ್ ತಂಡ ಚಿಕಿತ್ಸೆ ನೀಡುತ್ತಿದೆ.
ಶನಿವಾರ ರಾತ್ರಿಯೇ ಮಣಿಪಾಲ್ ಆಸ್ಪತ್ರೆಗೆ ಎಸ್.ಎಂ.ಕೃಷ್ಣ ಅವರನ್ನು ಸ್ಥಳಾಂತರಿಸಲಾಗಿದ್ದು, ರಾತ್ರಿಯಿಡೀ ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಅವರೂ ಎಸ್ಎಂಕೆ ಆರೋಗ್ಯದ ಬಗ್ಗೆ ನಿಗಾವಹಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕ ಡಾ.ಎಚ್.ಡಿ.ರಂಗನಾಥ್ ಕೂಡ ಆಸ್ಪತ್ರೆಯಲ್ಲೇ ಇದ್ದರು. ತೀವ್ರ ನಿಗಾ ಘಟಕದಲ್ಲಿ ಕೃಷ್ಣ ಅವರಿಗೆ ಚಿಕಿತ್ಸೆ ಮುಂದುವರಿದಿದೆ.