ಸಮಗ್ರ ನ್ಯೂಸ್: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾರ್ಭಟ ಮುಂದುವರಿದಿದ್ದು, ಮುಂದಿನ ಎರಡು ದಿನ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗೆ ಶುಕ್ರವಾರ ‘ರೆಡ್ ಅಲರ್ಟ್’ ಘೋಷಿಸಲಾಗಿದೆ.
ಹಾಸನ, ಶಿವಮೊಗ್ಗ, ಗದಗ, ಧಾರವಾಡ ಹಾಗೂ ಬೆಳಗಾವಿಗೆ ‘ಆರೆಂಜ್ ಅಲರ್ಟ್’ ನೀಡಲಾಗಿದೆ. ಬೀದರ್, ಕಲಬುರ್ಗಿ, ಬೆಂಗಳೂರು ನಗರ ಸೇರಿ 13 ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ.
ಕರಾವಳಿಯ ಎಲ್ಲ ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡಿನ ಬಳ್ಳಾರಿ, ಚಿಕ್ಕಮಗಳೂರು, ಕೊಡಗು ಹಾಗೂ ಶಿವಮೊಗ್ಗದಲ್ಲಿ ಶನಿವಾರದವರೆಗೆ ಅತ್ಯಧಿಕ ಮಳೆಯಾಗುವ ಸಾಧ್ಯತೆಯಿದೆ.
ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ವಿಜಯಪುರ ಹಾಗೂ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ಚಾಮರಾಜನಗರ, ಹಾಸನ, ಕೋಲಾರ, ಮಂಡ್ಯ, ಮೈಸೂರು, ತುಮಕೂರು, ರಾಮನಗರ ಜಿಲ್ಲೆಯ ಒಂದೆರಡು ಕಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
ಕರಾವಳಿ ತೀರದಲ್ಲಿ ಬಿರುಗಾಳಿಯ ವೇಗವು ಪ್ರತಿ ಗಂಟೆಗೆ 50 ಕಿ.ಮೀ.ನಿಂದ 60 ಕಿ.ಮೀ. ತಲುಪುವ ಸಾಧ್ಯತೆಯಿದೆ. ಆದ್ದರಿಂದ ಮೀನುಗಾರರು ಸಮುದ್ರಕ್ಕೆ ತೆರಳಬಾರದು ಎಂದು ಇಲಾಖೆ ಸೂಚಿಸಿದೆ.