ಸಮಗ್ರ ನ್ಯೂಸ್: ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಮತ್ತೆ ಏರಿಕೆಯಾಗುತ್ತಿದ್ದು, ನಾಲ್ಕನೇ ಅಲೆ ಭೀತಿ ಎದುರಾಗಿದೆ.
ಹೀಗಾಗಿ ಮುಂದಿನ 2-3 ವಾರಗಳು ನಿರ್ಣಾಯಕವಾಗಿದ್ದು, ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ.
ಈ ಹಿನ್ನಲೆ ರಾಜ್ಯ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಆರೋಗ್ಯ ಇಲಾಖೆ, ತಾಂತ್ರಿಕ ಸಲಹಾ ಸಮಿತಿ ಮೊರೆ ಹೋಗಿದ್ದು ಇಂದು ಸಂಜೆ 7 ಗಂಟೆಗೆ ಟಾಸ್ಕ್ ಫೋರ್ಸ್ ಜತೆ ಇಲಾಖೆಯ ಮಹತ್ವದ ಸಭೆ ನಡೆಸಿತು. ಕೊರೊನಾ ಪ್ರಕರಣ ಹೆಚ್ಚಳ ಸಂಬಂಧ ಚರ್ಚೆ ನಡೆಯಲಿದೆ.
ಮುನ್ನೆಚ್ಚರಿಕಾ ಕ್ರಮಗಳ ಕುರಿತು ತಾಂತ್ರಿಕ ಸಲಹಾ ಸಮಿತಿ ಜತೆ ಸಭೆ ನಡೆಸುವುದಾಗಿ ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು 222 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 17,89,117ಕ್ಕೆ ಏರಿಕೆಯಾಗಿದೆ. ಇಂದು ರಾಜಧಾನಿಯಲ್ಲೂ ಯಾವುದೇ ಕೊರೋನಾ ಸಾವು ವರದಿಯಾಗಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ.
ರಾಜ್ಯದಲ್ಲಿ ಇಂದು 203 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 39,11,040ಕ್ಕೆ ಏರಿಕೆಯಾಗಿದೆ. ಇನ್ನು 2441 ಸಕ್ರಿಯ ಪ್ರಕರಣಗಳಿವೆ.
ಈ ನಡುವೆ ರಾಜ್ಯದಲ್ಲಿ ಕೋವಿಡ್ ಸಂಪೂರ್ಣ ನಿಯಂತ್ರಣದಲ್ಲಿದೆ. ಅನಗತ್ಯವಾಗಿ ಯಾರೂ ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.







