ಸಮಗ್ರ ನ್ಯೂಸ್: ದೇಶದೆಲ್ಲೆಡೆ ಕೊರೊನಾ ವೈರಸ್ ತಾಂಡವವಾಡುತ್ತಿದ್ದಂತೆ, ಇದೀಗ ಹೊಸತೊಂದು ವೈರಸ್ ಕೇರಳದಲ್ಲಿ ಕಾಣಿಸಿಕೊಂಡಿದೆ. ಟೊಮೇಟೋ ವೈರಸ್ ಅಥವಾ ಟೊಮೇಟೋ ಜ್ವರ ಎಂದು ಕರೆಯಲ್ಪಡುತ್ತಿರುವ ಈ ಜ್ವರ ಎಲ್ಲರ ಆತಂಕಕ್ಕೆ ಕಾರಣವಾಗಿದೆ.
ಇದೇನಪ್ಪಾ, ಟೊಮೇಟೋ ಜ್ವರ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ಇದೀಗ ಕೇರಳದಲ್ಲಿ ಟೊಮೇಟೋ ಜ್ವರದ ಆತಂಕ ಹೆಚ್ಚಾಗಿದ್ದು, ಕೊಲ್ಲಂ ಜಿಲ್ಲೆಯೊಂದರಲ್ಲೇ ಬರೋಬ್ಬರಿ 82 ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಸೋಂಕು ತಗುಲಿದವರೆಲ್ಲ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಾಗಿದ್ದು, ವಾಸ್ತವ ಸ್ಥಿತಿಯ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಿಗಾ ವಹಿಸಿದೆ.
ಆದರೆ ಟೊಮೇಟೋ ಜ್ವರ ಅಂಟಿಕೊಂಡವರೆಲ್ಲ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೇ ಆಗಿರುವುದು ಆತಂಕವನ್ನು ಹುಟ್ಟಿಸುತ್ತಿದೆ. ಎಲ್ಲ ಸೋಂಕಿತರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಟೊಮೇಟೊ ಜ್ವರ ಇದೊಂದು ಅಪರೂಪದ ವೈರಲ್ ಸೋಂಕು ಆಗಿದೆ. ಈ ಜ್ವರದಲ್ಲಿ ಬಳಲುತ್ತಿರುವ ಮಕ್ಕಳಲ್ಲಿ ದದ್ದು ಮತ್ತು ಚರ್ಮದ ಕಿರಿಕಿರಿ ಮತ್ತು ನಿರ್ಜಲೀಕರಣ ಕಂಡು ಬರುತ್ತಿದೆ. ಇದರಿಂದ ದೇಹದ ಹಲವು ಭಾಗಗಳಲ್ಲಿ ಗುಳ್ಳೆಗಳನ್ನು ಉಂಟಾಗುತ್ತಿವೆ. ಈ ಗುಳ್ಳೆಗಳು ಸಾಮಾನ್ಯವಾಗಿ ಕೆಂಪು ಬಣ್ಣದ ದುಂಡಗಿನ ಆಕಾರದಲ್ಲಿ ಇರುವುದರಿಂದ ಇದನ್ನು ಟೊಮೇಟೋ ಜ್ವರ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿದೆ. ಕೊಲ್ಲಂ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಾತ್ರ ಈ ರೀತಿಯ ಜ್ವರದ ಪ್ರಕರಣಗಳು ವರದಿಯಾಗಿದ್ದು, ಇದು ಇತರ ಪ್ರದೇಶಗಳಿಗೂ ಹರಡಬಹುದು ಎಂದು ರಾಜ್ಯ ಆರೋಗ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ.