ಬೆಂಗಳೂರು: ಬಿಬಿಎಂಪಿ ಕಸದ ಲಾರಿ ಹರಿದು ಬ್ಯಾಂಕ್ ಅಧಿಕಾರಿಯೊಬ್ಬರು ಮೃತಪಟ್ಟ ದಾರುಣ ಘಟನೆ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.
ಮೃತರನ್ನು ಆರ್.ಆರ್.ನಗರ ನಿವಾಸಿ ಪದ್ಮಿನಿ(40)ಎಂದು ಗುರುತಿಸಲಾಗಿದೆ. ಇವರು ಖಾಸಗಿ ಬ್ಯಾಂಕ್ವೊಂದರ ಡೆಪ್ಯೂಟಿ ಮ್ಯಾನೇಜರ್ ಆಗಿದ್ದು, ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಸಂಜೆ 7.10ರ ಸುಮಾರಿಗೆ ಮನೆಗೆ ತೆರಳುತ್ತಿದ್ದರು. ಈ ವೇಳೆ ನಾಯಂಡಹಳ್ಳಿ ರಿಂಗ್ ರಸ್ತೆಯಲ್ಲಿ ನಾಗರಬಾವಿ ಕಡೆಯಿಂದ ನಾಯಂಡಹಳ್ಳಿ ಕಡೆಗೆ ತೆರಳುತ್ತಿದ್ದ ಬಿಬಿಎಂಪಿ ಕಸದ ಲಾರಿ, ನಾಯಂಡಹಳ್ಳಿ ರೈಲ್ವೆ ಅಂಡರ್ ಪಾಸ್ ಬಳಿ ವೇಗವಾಗಿ ಬಂದು ಪದ್ಮಿನಿ ಅವರು ಚಲಾಯಿಸುತ್ತಿದ್ದ ದ್ವಿಚಕ್ರವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಹಿತ ಪದ್ಮಿನಿ ರಸ್ತೆಗೆ ಬಿದ್ದಿದ್ದು, ಈ ವೇಳೆ ಕಸದ ಲಾರಿಯ ಮುಂದಿನ ಎಡಭಾಗದ ಚಕ್ರ ಪದ್ಮಿನಿ ಅವರ ಸೊಂಟದ ಮೇಲೆ ಹರಿದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಪದ್ಮಿನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಪಘಾತದ ಸುದ್ದಿ ತಿಳಿದು ಬ್ಯಾಟರಾಯನಪುರ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಪಘಾತಕ್ಕೆ ಬಿಬಿಎಂಪಿ ಕಸದ ಲಾರಿ ಚಾಲಕನ ವೇಗದ ಚಾಲನೆ ಹಾಗೂ ಅಜಾಗರೂಕತೆಯೇ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಅಪಘಾತದ ಬಳಿಕ ಚಾಲಕ ಸ್ಥಳದಲ್ಲೇ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಲಾರಿಯನ್ನು ಜಪ್ತಿ ಮಾಡಿದ್ದು, ಚಾಲಕನ ಬಂಧನಕ್ಕೆ ಬಲೆ ಬೀಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.