ಜೈಪುರ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹಣದುಬ್ಬರ ಏರಿಕೆಯ ಬಗ್ಗೆ ಕೇಂದ್ರ ಸರ್ಕಾರವನ್ನು ಭಾನುವಾರ ಗುರಿಯಾಗಿಸಿದ್ದಾರೆ, ಕೇಂದ್ರ ಸರ್ಕಾರವು ಸಾರ್ವಜನಿಕ ಕಲ್ಯಾಣವನ್ನು ಬಯಸುವುದಿಲ್ಲ ಅದು ಕೇವಲ ಕೆಲ ಉದ್ಯಮಿಗಳಿಗಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಜೈಪುರದ ವಿದ್ಯಾಧರ್ ನಗರ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಮಹಂಗಾಯಿ ಹಠಾವೋ ಬೆಲೆ ಏರಿಕೆ ನಿಲ್ಲಿಸಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ‘ಎರಡು ರೀತಿಯ ಸರ್ಕಾರಗಳಿವೆ. ಜನರ ಸೇವೆ, ಸಮರ್ಪಣೆ ಮತ್ತು ಸತ್ಯದ ಬಗ್ಗೆ ಮಾತನಾಡುವುದು ಸರ್ಕಾರದ ಗುರಿಯಾಗಿದೆ. ಸುಳ್ಳು, ದುರಾಸೆ ಮತ್ತು ಲೂಟಿಯೇ ಗುರಿಯಾಗಿರುವ ಸರಕಾರ ಕೂಡಾ ಇದೆ. ಈಗಿನ ಕೇಂದ್ರ ಸರಕಾರದ ಗುರಿ ಸುಳ್ಳು, ದುರಾಸೆ ಮತ್ತು ಲೂಟಿಯಾಗಿದೆ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಂದ್ರದ ಮೋದಿ ಸರ್ಕಾರ ಪದೇ ಪದೇ ಕೇಳುತ್ತದೆ ಎಂದು ಹೇಳಿದರು. ನಾನು ಹೇಳುತ್ತೇನೆ, ’70 ವರ್ಷಗಳ ಹಳಿ ಬಿಡಿ, ಏಳು ವರ್ಷದಲ್ಲಿ ಏನು ಮಾಡಿದ್ದೀರಿ ಎಂದು ಹೇಳಿ ಎಂದು ನೇರವಾಗಿ ಬಿಜೆಪಿಗೆ ಪ್ರಶ್ನೆ ಎಸೆದಿದ್ದಾರೆ. 70 ವರ್ಷಗಳಲ್ಲಿ ದೇಶದಲ್ಲಿ ಕಾಂಗ್ರೆಸ್ ಏನು ಮಾಡಿದೆಯೋ ಅದನ್ನೆಲ್ಲ ಬಿಜೆಪಿ ಸರ್ಕಾರ ಮಾರಾಟ ಮಾಡಲು ಬಯಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದರು. ಈ ರ್ಯಾಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿದಂತೆ ಕಾಂಗ್ರೆಸ್‌ನ ಎಲ್ಲಾ ಪ್ರಮುಖ ನಾಯಕರು ಉಪಸ್ಥಿತರಿದ್ದರು.







