ಸುಳ್ಯ: ನಗರದ ಮುಖ್ಯರಸ್ತೆಯ ಎರಡು ಭಾಗಗಳಲ್ಲಿ ಅಳವಡಿಸಲಾಗಿರುವ ಚರಂಡಿಯ ಸ್ಲ್ಯಾಬ್ ಗಳ ಅವೈಜ್ಞಾನಿಕತೆಯ ಕಾಮಗಾರಿಯಿಂದ ಹಲವಾರು ಮಂದಿ ಪಾದಚಾರಿಗಳು ಬಿದ್ದು ಗಾಯಗೊಂಡಿದ್ದಾರೆ. ಪ್ರತೀದಿನ ಒಂದಿಲ್ಲೊಂದು ಘಟನೆಗಳು ನಡೆಯುತ್ತಿದ್ದು, ಇದರಿಂದ ನಾಗರೀಕರು ಕಂಗೆಟ್ಟಿದ್ದಾರೆ.

ನಿನ್ನೆ ನಗರದ ಗಾಂಧಿನಗರದಲ್ಲಿ ಪತ್ರಕರ್ತರೊಬ್ಬರು ಈ ಪಾದಾಚಾರಿ ರಸ್ತೆಮೇಲೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಸ್ಲ್ಯಾಬ್ ಕುಸಿದು ಬಿದ್ದು ಅವರ ಕಾಲಿಗೆ ಬಲವಾದ ಗಾಯ ಉಂಟಾಗಿದೆ. ಘಟನೆಯನ್ನು ನೋಡಿದ ಸ್ಥಳೀಯರು ವರದಿಗಾರರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕೊಂಡೊಯ್ದಿದ್ದಾರೆ. ಘಟನೆಯಿಂದ ಅವರ ಮೊಣಕಾಲಿಗೆ ಗಾಯವಾಗಿದ್ದು ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.
ಪ್ರತೀದಿನ ಇಂತಹ ದುರ್ಘಟನೆಗಳು ಸಂಭವಿಸಿದರೂ ಹೆದ್ದಾರಿ ಪ್ರಾಧಿಕಾರ ಮಾತ್ರ ನಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಕಣ್ಮುಚ್ಚಿ ಕುಳಿತಿದೆ. ಈ ಹಿಂದೆಯೂ ಸಾಮಾಜಿಕ ಕಾರ್ಯಕರ್ತ ಡಿ.ಎಂ ಶಾರೀಕ್ ಈ ಅವೈಜ್ಞಾನಿಕ ಕಾಮಗಾರಿ ಕುರಿತಂತೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಸಂಬಂಧ ಸ್ಥಳ ತನಿಖೆ ಮಾಡಿದ್ದು ಹೊರತುಪಡಿಸಿದರೆ ಇನ್ಯಾವ ಪ್ರಯೋಜನವೂ ಆಗಿಲ್ಲ






