ಡಿಜಿಟಲ್ ಡೆಸ್ಕ್: ನಟ, ಆ್ಯಂಕರ್ ಹಾಗೂ ಆರ್ಸಿಬಿ ಇನ್ಸೈಡರ್ ದ್ಯಾನಿಶ್ ಸೇಠ್ ಸಹೋದರಿ ಕುಬ್ರಾ ಸೇಠ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ವೆಬ್ ಸೀರಿಸ್ನಲ್ಲಿ ಮಿಂಚಿರುವ ಅವರಿಗೆ ಹಾಲಿವುಡ್ನಿಂದಲೂ ಆಫರ್ ಇದೆ. ಈಗ ಅವರು ಹಳೆಯ ಘಟನೆ ಒಂದನ್ನು ನೆನಪು ಮಾಡಿಕೊಂಡಿದ್ದಾರೆ. ಈ ಘಟನೆ ಬಗ್ಗೆ ವಿವರಿಸುವಾಗ ಅವರು ಭಾವುಕರಾಗಿದ್ದರು.
‘ಸೇಕ್ರೆಡ್ ಗೇಮ್ಸ್’ ವೆಬ್ ಸರಣಿಯಲ್ಲಿ ಕುಬ್ರಾ ಸೇಠ್ ಮಾಡಿದ್ದ ಕುಕೂ ಎಂಬ ಪಾತ್ರ ಗಮನ ಸೆಳೆದಿತ್ತು. ಅವರು ಆ ವೆಬ್ ಸೀರಿಸ್ನಲ್ಲಿ ಇಂಟಿಮೇಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಅವರ ಪಾತ್ರ ಕೂಡ ಎಲ್ಲರ ಗಮನ ಸೆಳೆದಿತ್ತು. ಆದರೆ, ಈ ದೃಶ್ಯ ಶೂಟ್ ಮಾಡುವಾಗ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ . ಈ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಗಣೇಶ್ ಕಾಯ್ತೊಂಡೆಗೆ (ನವಾಜುದ್ದೀನ್ ಸಿದ್ಧಕಿ) ಕೂಕು (ಕುಬ್ರಾ ಸೇಟ್) ಮೇಲೆ ಪ್ರೀತಿ ಮೂಡುತ್ತದೆ. ಇಬ್ಬರೂ ಒಂದೆಡೆ ಸೇರುತ್ತಾರೆ. ಈ ವೇಳೆ ಇಬ್ಬರ ನಡುವೆ ಇಂಟಿಮೇಟ್ ದೃಶ್ಯಗಳಿವೆ. ಇಬ್ಬರ ನಡುವೆ ಮೊಳೆತ ಪ್ರೀತಿಯನ್ನು ವ್ಯಕ್ತಪಡಿಸಲು ಈ ದೃಶ್ಯದ ಅವಶ್ಯಕತೆ ಇತ್ತು. ಆದರೆ, ಇದನ್ನು ಶೂಟ್ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಈ ದೃಶ್ಯದ ಶೂಟ್ ಮಾಡುವಾಗ ಬರೋಬ್ಬರಿ ಏಳು ಟೇಕ್ ತೆಗೆದುಕೊಳ್ಳಲಾಗಿತ್ತು. ಇದರಿಂದ ಕುಬ್ರಾ ಆಘಾತಕ್ಕೆ ಒಳಗಾಗಿದ್ದರು. ಅಲ್ಲದೆ, ನೆಲದ ಮೇಲೆ ಬಿಕ್ಕಿಬಿಕ್ಕಿ ಅತ್ತಿದ್ದರು.
‘ಆ ದೃಶ್ಯವನ್ನು ಆರು ಬಾರಿ ಶೂಟ್ ಮಾಡಲಾಗಿತ್ತು. ಆದರೆ, ನಿರ್ದೇಶಕರಿಗೆ ಆ ಬಗ್ಗೆ ಖುಷಿ ಇರಲಿಲ್ಲ. ಏಳನೇ ಬಾರಿಗೆ ಶೂಟ್ ಮಾಡಿ ಮುಗಿಸಿದೆ. ನಂತರ ನಾನು ನೆಲದಮೇಲೆ ಮಲಗಿಕೊಂಡು ಬಿಕ್ಕಿಬಿಕ್ಕಿ ಅತ್ತೆ. ನಾನು ತುಂಬಾನೇ ಎಮೋಷನಲ್ ಆಗಿದ್ದೆ. ನಿರ್ದೇಶಕರು ಬಂದು ನೀವು ಹೊರಗೆ ಕಾಯಬಹುದು ಎಂದರು. ಆಗ ನನ್ನ ದೃಶ್ಯದ ಶೂಟ್ ಮುಗಿದಿದೆ ಎಂಬುದು ಖಚಿತವಾಗಿತ್ತು. ಆದಾಗ್ಯೂ ನಾನು ನೆಲದ ಮೇಲೆ ಮಲಗಿಕೊಂಡು ಅಳುತ್ತಲೇ ಇದ್ದೆ. ಆಗ ನವಾಜುದ್ದೀನ್ ಸಿದ್ಧಕಿ ಬಂದು, ನೀವು ಹೊರ ಹೋಗಬಹುದು. ನನ್ನ ದೃಶ್ಯದ ಶೂಟಿಂಗ್ ಇದೆ ಎಂದಿದ್ದರು’ ಎಂದು ಹಳೆಯ ಘಟನೆ ವಿವರಿಸಿದ್ದಾರೆ ಅವರು.
‘ಸೇಕ್ರೆಡ್ ಗೇಮ್ಸ್’ ಎರಡು ಸೀಸನ್ ಪ್ರಸಾರವಾಗಿದೆ. ನೆಟ್ಫ್ಲಿಕ್ಸ್ನಲ್ಲಿ ಇದು ಪ್ರಸಾರವಾಗಿದೆ. ಅನುರಾಗ್ ಕಶ್ಯಪ್, ವಿಕ್ರಮಾದಿತ್ಯ ಮೋಟ್ವಾನೆ, ನೀರಜ್ ಗಾಯ್ವನ್ ಇದನ್ನು ನಿರ್ದೇಶಿಸಿದ್ದಾರೆ. ಸೈಫ್ ಅಲಿ ಖಾನ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ.