ಸುಳ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಡಳಿತ ಮಂಡಳಿಯು ನೂತನ ಲಾಂಛನವನ್ನು ಸಿದ್ಧಗೊಳಿಸಿದೆ. ರಜತ ವರ್ಣದ ಏಳು ಹೆಡೆಯ ನಾಗರಾಜ ಮತ್ತು ಷಣ್ಮುಖನನ್ನು ಶ್ರೀ ದೇವರ ಉತ್ಸವ ಮೂರ್ತಿಯನ್ನು ಹೋಲುವ ಏಳು ಹೆಡೆ ನಾಗರಾಜನ ನಡುವೆ ಷಣ್ಮುಖ ವಿರಾಜಮಾನನಾಗಿರುವ ರಜತ ವರ್ಣದ ಚಿತ್ರವು ಲಾಂಛನದ ಮದ್ಯ ಭಾಗವನ್ನು ಅಲಂಕರಿಸಿದೆ.
ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿವಪ್ರಸಾದ್ ಆಚಾರ್ಯ ಪುತ್ತೂರುರವರು ತಮ್ಮ ಕೈಚಳಕದಿಂಡ ಲಾಂಛನವನ್ನು ಬಿಡಿಸಿದ್ದು, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಸಂಸದ ನಳಿನ್ ಕುಮಾರ್ ಕಟೀಲ್ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಲಾಂಛನವನ್ನು ಅನಾವರಣಗೊಳಿಸಿದರು.
ಶ್ರೀ ದೇವರ ಉತ್ಸವ ಮೂರ್ತಿಯನ್ನು ಹೋಲುವ ಏಳು ಹೆಡೆ ನಾಗರಾಜನ ನಡುವೆ ಷಣ್ಮುಖ ವಿರಾಜಮಾನನಾಗಿರುವ ರಜತ ವರ್ಣದ ಚಿತ್ರವು ಲಾಂಛನದ ಮಧ್ಯ ಭಾಗವನ್ನು ಅಲಂಕರಿಸಿದೆ. ಕೆಳ ಭಾಗದಲ್ಲಿ “ಅಜೇಯೋಯಂ ವಿಶ್ವಸ್ಯ” ಎಂಬ ವ್ಯಾಖ್ಯೆಯನ್ನು ಕೆತ್ತಲಾಗಿದೆ. ತಾರಕನ ಸಂಹಾರ ಮಾಡಿದ ದೇವಸೇನಾಪತಿಯು ಸೋಲನ್ನರಿಯದ ವಿಶ್ವದೊಡೆಯ ಮತ್ತು ವಿಶ್ವದಲ್ಲಿಯೇ ಜಯಿಸಲಾಗದ ಶಕ್ತಿ ಎಂಬ ಅರ್ಥವನ್ನು ಈ ವ್ಯಾಖ್ಯೆ ಪ್ರತಿಬಿಂಬಿಸುತ್ತದೆ. ವ್ಯಾಖ್ಯೆಯ ಇಕ್ಕೆಲದಲ್ಲಿ ಷಣ್ಮುಖನ ವಾಹನವಾದ ನವಿಲಿನ ಗರಿಯನ್ನು ಚಿತ್ರೀಕರಿಸಲಾಗಿದೆ. ಅಲ್ಲದೆ ಲಾಂಛನದ ಸುತ್ತಲೂ ಕನ್ನಡ, ಹಿಂದಿ ಮತ್ತು ಇಂಗ್ಲೀಷ್ನಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಎಂಬ ಕೆತ್ತನೆ ಇದೆ. ಮುಂದೆ ರಥಬೀದಿಯಲ್ಲಿ ನಿರ್ಮಿತವಾಗುವ ಪಾರಂಪರಿಕ ಕಲ್ಲಿನ ಕಟ್ಟಡದಲ್ಲಿ ಲಾಂಛನವನ್ನು ಕಲ್ಲಿನಿಂದ ಕೆತ್ತನೆ ಮಾಡಿ ಅನಾವರಣಗೊಳಿಸಲು ಆಡಳಿತ ಮಂಡಳಿ ಚಿಂತನೆ ನಡೆಸಿದೆ.
ದೇವಳದ ವೆಬ್ಸೈಟ್ನಲ್ಲಿ ಇನ್ನು ಮುಂದೆ ಈ ಲಾಂಛನವು ಪ್ರಧಾನವಾಗಿ ಗೋಚರಿಸಲಿದೆ. ಇದರಿಂದಾಗಿ ಶ್ರೀ ದೇವಳದ ವೆಬ್ಸೈಟ್ ಅನ್ನು ಭಕ್ತರು ಸುಲಲಿತವಾಗಿ ಕಂಡು ಹಿಡಿಯಲು ಸಹಕಾರಿಯಾಗಲಿದೆ. ದೇವಳದಲ್ಲಿ ಎಲ್ಲಾ ಸೇವೆಗಳು ಹಾಗೂ ಇ-ಆಡಳಿತ ಮತ್ತು ಇ-ಸೇವೆಗೆ ಉಪಯುಕ್ತವಾಗುವ ದೃಷ್ಠಿಕೋನದಿಂದ ಆಡಳಿತ ಮಂಡಳಿ ಶ್ರೀ ದೇವಳದ ನೂತನ ಲಾಂಛನವನ್ನು ಅನಾವರಣಗೊಳಿಸಿದೆ. ಮುಂದೆ ಎಲ್ಲಾ ಮುಜರಾಯಿ ದೇವಳಗಳ ವಿವರ, ಸೇವೆಗಳ ವಿವರ ಇತ್ಯಾದಿಗಳು ಸರಕಾರದ ವೆಬ್ ಪೋರ್ಟಲ್ ಆದ ಎನ್ಐಸಿಯಲ್ಲಿ ಬರುವ ಕಾರಣ ಕುಕ್ಕೆ ದೇವಳದ ಬಗ್ಗೆ ತಿಳಿದುಕೊಳ್ಳಲು ಈ ಲಾಂಛನ ಪೂರಕವಾಗಿ ಸಹಕರಿಸಲಿದೆ.