ಸಮಗ್ರ ನ್ಯೂಸ್: ರಾಜ್ಯದ ಹಲವು ಭಾಗಗಳಲ್ಲಿ ಇಂದು (ನವೆಂಬರ್ 2) ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಕರಾವಳಿ ತೀರ, ದಟ್ಟ ಮಲೆನಾಡು ಹಾಗೂ ಒಳನಾಡಿನ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ವಾತಾವರಣ ನಿರ್ಮಾಣವಾಗಲಿದೆ.
ನವೆಂಬರ್ 1ರಿಂದ 5ರವರೆಗೆ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಅಲ್ಲಲ್ಲಿ ಗುಡುಗು-ಮಿಂಚು ಕೂಡ ಸಂಭವಿಸಬಹುದು. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದ ಕೆಲವು ಭಾಗಗಳಲ್ಲಿ ಇಂದು ವೀಕೆಂಡ್ ಮುಕ್ತಾಯದ ಬೆನ್ನಲ್ಲೇ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.
ಇತ್ತೀಚಿನ ದಿನಗಳಲ್ಲಿ ಕಾರವಾರ ಭಾಗದಲ್ಲಿ ಗರಿಷ್ಠ ತಾಪಮಾನವು 32.4°C ರಷ್ಟು ದಾಖಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಸೇರಿದಂತೆ ಮಲೆನಾಡು ಭಾಗದಲ್ಲಿ ತಾಪಮಾನವು 21°C ರಿಂದ 24°C ಗೆ ಕುಸಿದಿದೆ.
ಬೀದರ್, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಬಾಗಲಕೋಟೆ, ವಿಜಯಪುರ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳ ಕೆಲವು ಭಾಗಗಳಲ್ಲೂ ಮಳೆ ಅಥವಾ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಇಂದು ಮಧ್ಯಾಹ್ನದ ನಂತರ ಹವಾಮಾನ ಬದಲಾಗಲಿದೆ.









