ಸಮಗ್ರ ನ್ಯೂಸ್: ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ್ದ ಈರುಳ್ಳಿ ಈಗ ರೈತರ ಕಣ್ಣಲ್ಲಿ ಕಣ್ಣೀರು ತರಿಸುತ್ತಿದೆ. ಕೆಲವೇ ದಿನಗಳ ಹಿಂದೆ ಕೆಜಿಗೆ ₹60ರಿಂದ ₹70ರವರೆಗೆ ಬೆಲೆ ಕಂಡಿದ್ದ ಈರುಳ್ಳಿ ದರ ದಿಢೀರ್ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ. ಗದಗ ಎಪಿಎಂಸಿ ಮಾರುಕಟ್ಟೆಯಲ್ಲಿ ನಾಲ್ಕು ದಿನಗಳ ಹಿಂದೆ ಕ್ವಿಂಟಾಲ್ಗೆ ₹5,000ರಿಂದ ₹6,000ರವರೆಗೆ ಮಾರಾಟವಾಗುತ್ತಿದ್ದ ಈರುಳ್ಳಿ, ಈಗ ₹2,500ರಿಂದ ₹3,500ಕ್ಕೆ ಇಳಿಕೆಯಾಗಿದೆ.
ಗದಗ ನಗರದ ಎಪಿಎಂಸಿ ಆವರಣದಲ್ಲಿ ಎಲ್ಲಿ ನೋಡಿದರೂ ಈರುಳ್ಳಿ ರಾಶಿಗಳೇ ಕಾಣಿಸುತ್ತಿವೆ. ಭೀಕರ ಬರದ ನಡುವೆಯೂ ಕಷ್ಟಪಟ್ಟು ಈರುಳ್ಳಿ ಬೆಳೆದ ರೈತರು, ಉತ್ತಮ ಇಳುವರಿ ಮತ್ತು ಬಂಪರ್ ಬೆಲೆಯ ನಿರೀಕ್ಷೆಯಲ್ಲಿದ್ದರು. ಆದರೆ, ನಾಲ್ಕು ದಿನಗಳ ಹಿಂದಷ್ಟೇ ₹5,000ರಿಂದ ₹6,000ರವರೆಗೆ ಇದ್ದ ಕ್ವಿಂಟಾಲ್ ಈರುಳ್ಳಿ ದರ ಈಗ ದಿಢೀರ್ ಕುಸಿದಿರುವುದು ರೈತರ ನಿರೀಕ್ಷೆಗಳಿಗೆ ತಣ್ಣೀರೆರಚಿದೆ.
ಈರುಳ್ಳಿ ದರ ಕುಸಿತಕ್ಕೆ ದಲ್ಲಾಳಿಗಳ ಕುತಂತ್ರವೇ ಕಾರಣ ಎಂದು ರೈತರು ಗಂಭೀರ ಆರೋಪ ಮಾಡಿದ್ದಾರೆ. ಮಾಧ್ಯಮಗಳ ಕ್ಯಾಮೆರಾಗಳು ಮಾರುಕಟ್ಟೆಗೆ ಬಂದಾಗ ಬೆಲೆ ಹೆಚ್ಚಿಸುವಂತೆ ವರ್ತಿಸುವ ದಲ್ಲಾಳಿಗಳು, ಕ್ಯಾಮೆರಾಗಳು ಹೋದ ಬಳಿಕ ಮತ್ತೆ ದರ ಇಳಿಸುತ್ತಾರೆ ಎಂಬುದು ರೈತರ ಆರೋಪ. ಈ ಆಟದಿಂದ ಈರುಳ್ಳಿ ಬೆಳೆದ ಅನ್ನದಾತರಿಗೆ ಅನ್ಯಾಯವಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.









