ಸಮಗ್ರ ನ್ಯೂಸ್: ‘ನಾನು ಕಾನೂನು ಉಲ್ಲಂಘಿಸಿ ಏನಾದರೂ ಕೆಲಸ ಮಾಡಿದ್ದರೆ ಕೇಸ್ ಹಾಕಿ. ನನ್ನಿಂದ ಏನೂ ಅಡ್ಡಿಯಿಲ್ಲ. ಎಲ್ಲವೂ ನೋಡಿ ಆಗಿದೆ. ಈಗ ನನ್ನ ಮೇಲೆ ಏನೋ ಕೇಸ್ ಹಾಕಲು ಹೊರಟಿದ್ದಾರೆ. ನನಗೆ ಅದರ ಬಗ್ಗೆ ತಲೆಬಿಸಿ ಇಲ್ಲ. ನನ್ನ ವಿರುದ್ಧ 110ಕ್ಕೂ ಹೆಚ್ಚು ಕೇಸ್ಗಳಿವೆ. ಅದಕ್ಕೆ ಇದೊಂದು ದೊಡ್ಡ ಸಂಗತಿಯಲ್ಲ, ಒಂದು ಕೂದಲಿನ ಹಾಗೆ’ ಎಂದು ಸಂಘಪರಿವಾರದ ಮುಖಂಡ ಪ್ರಭಾಕರ ಭಟ್ ಕಲ್ಲಡ್ಕ ಪೊಲೀಸ್ ನೋಟೀಸ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಬಿ.ಸಿ.ರೋಡಿನ ರಕ್ತೇಶ್ವರಿ ಸನ್ನಿಧಿ ಬಳಿ, ನ್ಯಾಯಾಲಯದಿಂದ ಜಾಮೀನು ದೊರೆತಿದ್ದರೂ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧನ ಮುಂದುವರಿಸಿರುವುದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಮಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಆಯೋಜಿಸಿದ್ದ ಪ್ರತಿಭಟನಾ ಸಭೆಯ ವೇಳೆ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
‘ನಾನು ಯಾರ ಹತ್ತಿರ ಬೇಕಾದರೂ ಮಾತನಾಡಬಹುದು. ಸಂವಿಧಾನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ನಮಗೆ ವಾಕ್ ಸ್ವಾತಂತ್ರ್ಯ ನೀಡಿದ್ದಾರೆ. ನಾನು ಮಾತನಾಡಿದ್ದೇನೆ. ಮಾತನಾಡಿದ್ದರಲ್ಲಿ ತಪ್ಪೇನು ? ನಾನು ಅವರ ಬಳಿ ಹೋಗಿ ಹೊಡಿ ಎಂದು ಹೇಳಿದ್ದೇನೆಯೇ ? ಕೊಲ್ಲು ಎಂದು ಹೇಳಿದ್ದೇನೆಯೇ ? ಆ ಸಂಭಾಷಣೆ ಅವರಿಗೆ ಸಿಕ್ಕಿಲ್ಲವೇ ? ಸಿಕ್ಕಿದ್ದರೆ ಅದರಲ್ಲಿ ಏನಿತ್ತು ಎಂಬುದನ್ನು ಕೇಳಿ’ ಎಂದರು.









