ಸಮಗ್ರ ನ್ಯೂಸ್: ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅತ್ಯಂತ ಮಹತ್ವದ ಕಾನೂನು ಪ್ರಕ್ರಿಯೆ ನ್ಯಾಯಾಲಯದಲ್ಲಿ ನಡೆಯಲಿದೆ.
ಇಂದು ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ (ಅಪ್ರೂವರ್) ಬದಲಾಗಿರುವ ಪ್ರದೋಷ್ ಹೇಳಿಕೆಯನ್ನು ನ್ಯಾಯಾಧೀಶರ ಸಮ್ಮುಖದಲ್ಲಿ ದಾಖಲಿಸಿಕೊಳ್ಳಲಾಗುತ್ತಿದ್ದು, ಪ್ರಕರಣಕ್ಕೆ ಬಲವಾದ ತಿರುವು ಸಿಗುವ ಸಾಧ್ಯತೆಯಿದೆ. ಪ್ರದೋಷ್ ಅಪ್ರೂವರ್ ಆಗಿ ಪರಿಗಣಿಸಲ್ಪಟ್ಟಿರುವುದರಿಂದ, ಈ ಕೊಲೆ ಪ್ರಕರಣದಲ್ಲಿ ಇನ್ಮುಂದೆ ಆರೋಪಿಗಳ ಸಂಖ್ಯೆ 16ಕ್ಕೆ ಇಳಿಕೆಯಾಗಿದೆ.
ಇಂದು ಕೋರ್ಟ್‌ನಲ್ಲಿ ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕ (SPP) ಪ್ರಸನ್ನ ಕುಮಾರ್ ಅವರು ಪ್ರದೂಷ್‌ನ ಮುಖ್ಯ ವಿಚಾರಣೆ (ಚೀಫ್ ಎಕ್ಸಾಮಿನೇಷನ್) ನಡೆಸಲಿದ್ದಾರೆ. ಈಗಾಗಲೇ ಲಿಖಿತ ರೂಪದಲ್ಲಿ ಘಟನೆಯ ಸಂಪೂರ್ಣ ವಿವರಗಳನ್ನು ನೀಡಿರುವ ಪ್ರದೂಷ್, ನ್ಯಾಯಾಧೀಶರ ಮುಂದೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆಯನ್ನು ಬಿಚ್ಚಿಡಲಿದ್ದಾನೆ. ಪ್ರತಿಯೊಬ್ಬ ಆರೋಪಿಯ ನಿರ್ದಿಷ್ಟ ಪಾತ್ರವೇನು ಎಂಬುದನ್ನು ಆತ ಸಾಕ್ಷಿ ನುಡಿಯಲಿದ್ದು, ಇದು ದರ್ಶನ್ ಹಾಗೂ ಪವಿತ್ರಾ ಗೌಡಗೆ ಕಾನೂನುಬದ್ಧವಾಗಿ ದೊಡ್ಡ ಆತಂಕ ತಂದೊಡ್ಡಿದೆ.
ಪ್ರಾಸಿಕ್ಯೂಷನ್‌ನ ಚೀಫ್ ಎಕ್ಸಾಮಿನೇಷನ್ ಪೂರ್ಣಗೊಂಡ ತಕ್ಷಣವೇ, ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಒಟ್ಟು 16 ಆರೋಪಿಗಳ ಪರ ವಕೀಲರು ಪ್ರದೂಷ್‌ನನ್ನು ಸುದೀರ್ಘ ಕ್ರಾಸ್ ಎಕ್ಸಾಮಿನೇಷನ್‌ಗೆ (ಪಟವಾಲ) ಒಳಪಡಿಸಲಿದ್ದಾರೆ. ಅಪ್ರೂವರ್ ತನಗೆ ಶಿಕ್ಷೆಯಿಂದ ವಿನಾಯಿತಿ ಸಿಗಲಿ ಎಂಬ ಕಾರಣಕ್ಕಾಗಿ ಸುಳ್ಳು ಸಾಕ್ಷಿ ಹೇಳುತ್ತಿರಬಹುದು ಎಂಬ ಸಂಶಯವಿರುವುದರಿಂದ, ಆತನ ಹೇಳಿಕೆಯ ಸತ್ಯಾಸತ್ಯತೆಯನ್ನು ಹೊರತೆಗೆಯಲು 16 ಮಂದಿ ವಕೀಲರು ನಡೆಸುವ ಕಠಿಣ ಪ್ರಶ್ನೆಗಳ ಸುರಿಮಳೆಯನ್ನು ಎದುರಿಸುವುದು ಪ್ರದೂಷ್‌ಗೆ ದೊಡ್ಡ ಸವಾಲಾಗಲಿದೆ.
ಇನ್ನೊಂದೆಡೆ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಲು ಸಮಯಾವಕಾಶ ಬೇಕಾಗಿದ್ದು, ಅಲ್ಲಿಯವರೆಗೆ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಈಗಾಗಲೇ ವಜಾಗೊಳಿಸಿದೆ. ಇದರಿಂದಾಗಿ ದರ್ಶನ್ ಹಾಗೂ ಇತರ ಆರೋಪಿಗಳಿಗೆ ಕಾನೂನು ಸಂಕಷ್ಟ ಎದುರಾಗಿದ್ದು, ಇಂದು ದಾಖಲಾಗಲಿರುವ ಪ್ರದೋಷ್ ಹೇಳಿಕೆಯು ಈ ಇಡೀ ಪ್ರಕರಣದ ಭವಿಷ್ಯವನ್ನು ನಿರ್ಧರಿಸುವಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸಲಿದೆ.









