ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಕೆಲವು ಕಡೆ ಮಳೆಯಾಗಿದ್ದು, ಉಳಿದಂತೆ ಬಿಸಿಲು, ಮೋಡದಿಂದ ಕೂಡಿದ ವಾತಾವಣ ಇತ್ತು. ಸೆ. 20, 21ರಂದು ಮಳೆ ಸುರಿಯುವ ಸಾಧ್ಯತೆ ಇದ್ದು, ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ ಭಾಗಶಃ ಮೋಡ ವಾತಾವರಣ ಮುಂದುವರಿಯಲಿದೆ.
ಅಲ್ಲಲ್ಲಿ ಶುಕ್ರವಾರ ಮುಂಜಾನೆ ಲಘು ಮಳೆಯಾಗಬಹುದು. ಮುಂದಿನ 2-3 ದಿನ ಇದೇ ರೀತಿಯ ಹವೆ ಇರಲಿದ್ದು, ಬಂಗಾಳ ಕೊಲ್ಲಿಯ ವಾಯುಭಾರಕುಸಿತ ಒಂದೆರಡು ದಿನ ತಡವಾಗಿ ಸಂಭವಿಸುವ ಕಾರಣ ಕರಾವಳಿ ಜಿಲ್ಲೆಗಳಲ್ಲಿ ಸೆ 20ರ ಬಳಿಕ ಸಾಧಾರಣ ಮಳೆ ಸಾಧ್ಯತೆ ಇದೆ.
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ತಮಿಳುನಾಡು, ದಕ್ಷಿಣ ಕರ್ನಾಟಕ ತನಕ ನಿಮ್ನ ಒತ್ತಡ ಮುಂದುವರಿದಿದೆ. ಇದರಿಂದಾಗಿ ದಕ್ಷಿಣ ಕರ್ನಾಟಕದಲ್ಲಿ ಮಳೆ ಯಾಗುತ್ತಿದ್ದು, ಸೆ. 20, 21ಕ್ಕೆ ಮಾಯನ್ಮಾರ್ಸಮೀಪ ವಾಯುಭಾರ ಕುಸಿತ ಆಗಿ ಒರಿಸ್ಸಾದತ್ತ ಚಲಿಸಲಿದೆ. ಪಶ್ಚಿಮದ ಮೋಡ ಬಂದರೆ ಮಾತ್ರ ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಬಹುದು.
ಸುಳ್ಯ ತಾಲೂಕಿನ ವಿವಿಧೆಡೆ ಗುರುವಾರ ಉತ್ತಮ ಮಳೆ ಸುರಿಯಿತು. ಸುಬ್ರಹ್ಮಣ್ಯದಲ್ಲಿ ಸಂಜೆ ಭಾರೀ ಮಳೆಯಾಗಿದೆ. ಗುತ್ತಿಗಾರು, ಆರಂತೋಡು, ನೆಲ್ಲೂರು ಕೇಮ್ರಾಜೆ, ಮಲ್ಲಾರ, ಕಲ್ಮಡ್ಕ, ಮರ್ಕಂಜ, ಹರಿಹರ ಪಲ್ಲತ್ತಡ್ಕದಲ್ಲಿ ಉತ್ತಮ ಮಳೆಯಾಗಿದೆ.
ಉಡುಪಿ ಜಿಲ್ಲೆಯ ಕೆಲವೆಡೆ ಗುರುವಾರ ಮುಂಜಾನೆ ಮಳೆ ಸುರಿದಿದೆ. ಮಣಿಪಾಲ, ಪರ್ಕಳ, ಆತ್ರಾಡಿ, ಹಿರಿಯಡಕ, ಸಹಿತ ವಿವಿಧೆಡೆ ಮುಂಜಾನೆ ಉತ್ತಮ ಮಳೆಯಾಗಿದೆ. ಇನ್ನು ಉಡುಪಿ, ಕುಂದಾಪುರ, ಬೈಂದೂರು, ಬ್ರಹ್ಮಾವರ, ಕಾಪು, ಕುಂದಾಪುರ, ಹೆಬ್ರಿ, ಕಾರ್ಕಳ ತಾಲೂಕುಗಳ ಕೆಲವೆಡೆಗಳಲ್ಲಿ ಸಾಧಾರಣ ಮಳೆ ಸುರಿದಿದೆ. ಗುರುವಾರ ಉಡುಪಿಯಲ್ಲಿ ರಾಜ್ಯದಲ್ಲಿಯೇ ಅಧಿಕ 3 ಸೆಂ.ಮೀ. ಮಳೆಯಾಗಿದೆ.










