ಸಮಗ್ರ ನ್ಯೂಸ್: ಕಲ್ಮಕಾರು- ಗಾಳಿಬೀಡು-ಮಡಿಕೇರಿ ನಡುವೆ ಬ್ರಿಟಿಷರ ಕಾಲದಿಂದಲೇ ಬಳಕೆಯಲ್ಲಿದ್ದ ರಸ್ತೆ ಸದ್ಯ ತಾಂತ್ರಿಕ ಮತ್ತು ಇತರ ಕಾರಣಗಳಿಗಾಗಿ ಬಂದ್ ಆಗಿದೆ. ಇಲ್ಲಿನ ರಸ್ತೆ ಮರು ನಿರ್ಮಾಣಗೊಂಡರೆ ಸುಬ್ರಹ್ಮಣ್ಯ ಭಾಗದಿಂದ ಮಡಿಕೇರಿಗೆ ಕೇವಲ 25 ಕಿ.ಮೀ ನಲ್ಲಿ ಸಂಪರ್ಕ ದೊರೆಯಲಿದೆ.
ಈಗ 120 ಕಿ.ಮೀ ಸುತ್ತಿ ಬಳಸಿ ಸಾಗುವುದು ತಪ್ಪುತ್ತದೆ. ಜತೆಗೆ ಪ್ರವಾಸೋದ್ಯಮಕ್ಕೂ ಅನುಕೂಲವಾಗಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಇದರ ಜತೆಗೆ ಈ ಭಾಗದಲ್ಲಿ ಬರುವ ಮಡಿಕೇರಿ ತಾಲೂಕಿಗೆ ಸೇರಿದ ಭಾಗದ ಜನರಿಗೆ ತಾಲೂಕು ಕೇಂದ್ರಕ್ಕೆ ಹೋಗಲು ಅನುಕೂಲವಾಗಲಿದೆ.
ಸುಳ್ಯ ತಾಲೂಕಿನ ಕಲ್ಮಕಾರು ಗ್ರಾಮದ ಕೋಡಕಲ್, ಕಡಮಕ್ಕಲ್ಲು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಸುಮಾರು ಹಲವು ಕುಟುಂಬಗಳಿಗೆ ಮಡಿಕೇರಿಯೇ ಪ್ರಮುಖ ತಾಲೂಕು ಕೇಂದ್ರವಾಗಿದೆ. ಪಂಚಾಯತ್ ಹಾಗೂ ಇತರ ಆಡಳಿತಾತ್ಮಕ ಕೆಲಸಗಳಿಗಾಗಿ ಹಿಂದೆ ಜೀಪ್ ಮೂಲಕ ಸುಮಾರು Rs. 300 ವೆಚ್ಚದಲ್ಲಿ ಮಡಿಕೇರಿ ತಲುಪುತ್ತಿದ್ದ ಜನರು, ರಸ್ತೆ ಸಂಚಾರ ಸ್ಥಗಿತಗೊಂಡ ಬಳಿಕ ಪರ್ಯಾಯ ಮಾರ್ಗದಲ್ಲಿ ತೆರಳಲು ಸುಮಾರು Rs. 1000 ಖರ್ಚು ಮಾಡಬೇಕಾಗಿದೆ.
ರಸ್ತೆ ಸಂಪರ್ಕ ಕಡಿತಗೊಂಡಿರುವುದು ಕೇವಲ ಸಂಚಾರ ಸಮಸ್ಯೆಯಾಗಿರದೆ, ಗಡಿಭಾಗದ ಗ್ರಾಮಗಳ ಆಡಳಿತಾತ್ಮಕ ಹಾಗೂ ಆರ್ಥಿಕ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದೆ. ದಿನಗೂಲಿ ಹಾಗೂ ಸಣ್ಣಪುಟ್ಟ ಉದ್ಯೋಗ ಅವಲಂಬಿಸಿರುವ ಕುಟುಂಬಗಳು ತಮ್ಮ ಆದಾಯದ ಗಮನಾರ್ಹ ಭಾಗವನ್ನು ಹೆಚ್ಚುವರಿ ಸಂಚಾರ ವೆಚ್ಚಕ್ಕೆ ಮೀಸಲಿಡಬೇಕಾಗಿದೆ.
ರಸ್ತೆ ಸಂಪರ್ಕ ಕಡಿತಗೊಂಡಿರುವುದು ಕೇವಲ ಸಂಚಾರ ಸಮಸ್ಯೆಯಾಗಿರದೆ, ಗಡಿಭಾಗದ ಗ್ರಾಮಗಳ ಆಡಳಿತಾತ್ಮಕ ಹಾಗೂ ಆರ್ಥಿಕ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದೆ. ದಿನಗೂಲಿ ಹಾಗೂ ಸಣ್ಣಪುಟ್ಟ ಉದ್ಯೋಗ ಅವಲಂಬಿಸಿರುವ ಕುಟುಂಬಗಳು ತಮ್ಮ ಆದಾಯದ ಗಮನಾರ್ಹ ಭಾಗವನ್ನು ಹೆಚ್ಚುವರಿ ಸಂಚಾರ ವೆಚ್ಚಕ್ಕೆ ಮೀಸಲಿಡಬೇಕಾಗಿದೆ.
ಪರಿಸರ ಸೂಕ್ಷ್ಮ ವಲಯಕ್ಕೆ ಸಂಬಂಧಿಸಿದ ಕಾರಣಗಳನ್ನು ಮುಂದಿಟ್ಟು ರಸ್ತೆಯ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ ಎನ್ನಲಾಗುತ್ತಿದೆ. ಅರಣ್ಯ ಇಲಾಖೆಯಿಂದ ಸಂಚಾರಕ್ಕೆ ಅವಕಾಶವಿರುವ ಸಂದರ್ಭದಲ್ಲಿಯೂ ಸರ್ಕಾರದ ಆದೇಶದಿಂದಾಗಿ ಸಾರ್ವಜನಿಕರು ರಸ್ತೆ ಬಳಸಲು ಸಾಧ್ಯವಾಗುತ್ತಿಲ್ಲ ಎಂಬುದು ಸ್ಥಳೀಯರ ಅಳಲು.
ಸೆ.18 ರಂದು ಮಂಗಳೂರಿನಲ್ಲಿ ನಡೆಯಲಿರುವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಕಲ್ಮಕಾರು-ಗಾಳಿಬೀಡು-ಮಡಿಕೇರಿ ರಸ್ತೆಯ ಪುನರಾರಂಭದ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಹಲವು ವರ್ಷಗಳಿಂದ ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಸಂಕಷ್ಟ ಎದುರಿಸುತ್ತಿರುವ ಗಡಿಭಾಗದ ಗ್ರಾಮಸ್ಥರ ಬಹುಕಾಲದ ಬೇಡಿಕೆಯನ್ನು ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಪರಿಗಣಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.









