ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2026ರಲ್ಲಿ ಇದುವರೆಗೆ ಒಟ್ಟು 87 ಎಚ್1ಎನ್1 ರೀತಿಯ (ಇನ್‌ಫ್ಲುಯೆಂಜಾ 1) ಪ್ರಕರಣಗಳು ದೃಢಪಟ್ಟಿವೆ. ಈ ರೋಗವನ್ನು ಪತ್ತೆ ಹಚ್ಚಲು, ಹರಡದಂತೆ ನಿಗಾ ವಹಿಸಲು ಹಾಗೂ ಸೂಕ್ತ ಚಿಕಿತ್ಸೆ ಒದಗಿಸಲು ಆರೋಗ್ಯ ಇಲಾಖೆ ಕ್ರಮ ವಹಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ತಿಳಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಈ ಕುರಿತು ಮಾಹಿತಿ ನೀಡಿದ ಅವರು, ‘ಇನ್‌ಫ್ಲುಯೆಂಜಾ ವೈರಸ್‌ನಿಂದ ಹರಡುವ ಎಚ್1ಎನ್1 ಪ್ರಕರಣಗಳ ಸಂಖ್ಯೆ ಹೆಚ್ಚಾದರೂ ಅದನ್ನು ಸಮರ್ಥವಾಗಿ ನಿಭಾಯಿಸಲು ಇಲಾಖೆ ಅಗತ್ಯ ಮೂಲಸೌಕರ್ಯ ಹಾಗೂ ಔಷಧವನ್ನು ಹೊಂದಿದೆ. ಈ ಕಾಯಿಲೆಯ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿಗದಿತ ಕಣ್ಗಾವಲು ಕೇಂದ್ರಗಳನ್ನಾಗಿ ಗುರುತಿಸಲಾಗಿದೆ’ ಎಂದರು.
‘ತೀವ್ರ ಉಸಿರಾಟದ ಸಮಸ್ಯೆ, ಗರ್ಭಿಣಿಯರು, ಕ್ಯಾನ್ಸರ್ ಪೀಡಿತರು, ಡಯಾಲಿಸಿಸ್‌ಗೆ ಒಳಗಾಗುತ್ತಿರುವವರು, ಅಧಿಕ ರಕ್ತದ ಒತ್ತಡ ಹೊಂದಿರುವವರು ಎನ್1ಎನ್1ನಿಂದ ಸಮಸ್ಯೆ ಎದುರಿಸುವ ಸಾಧ್ಯತೆ ಜಾಸ್ತಿ. ಇದರ ಚಿಕಿತ್ಸೆಗೆ ಒಸಾಲ್ಟಮಿವಿರ್ ಔಷಧ, ಮಕ್ಕಳಿಗೆ ನೀಡುವ ಸಿರಪ್‌ಗಳು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿವೆ. ರೋಗಿಗಳನ್ನು ಕ್ವಾರಂಟೈನ್ ಮಾಡುವ ಸಂದರ್ಭದ ಎದುರಾದರೆ, ಅದಕ್ಕೆ ಬೇಕಾದ ಪಿಪಿಇ ಕಿಟ್ , ಎನ್-95 ಮುಖಗವಸುಗಳೆಲ್ಲವೂ ಯಥೇಚ್ಛವಾಗಿ ಲಭ್ಯ ಇವೆ’ ಎಂದರು.
‘ಈ ಸೋಂಕಿಗೆ ಒಳಗಾದವರನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಪ್ರತ್ಯೇಕಿಸಿ, ಚಿಕಿತ್ಸೆ ನೀಡಿದರೆ, ಈ ರೋಗ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಈ ರೋಗ ಪತ್ತೆಹಚ್ಚುವಿಕೆ ಹಾಗೂ ಅಗತ್ಯ ಚಿಕಿತ್ಸೆ ನೀಡುವ ಕುರಿತು ಆರೋಗ್ಯ ಸಿಬ್ಬಂದಿಗೆ ತರಬೇತಿ ನೀಡಿದ್ದೇವೆ. ಸಾರ್ವಜನಿಕರು ಕೆಮ್ಮುವಾಗ ಅನುಸರಿಸಬೇಕಾದ ಶಿಷ್ಟಾಚಾರ ಪಾಲಿಸುವ ಹಾಗೂ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಈ ರೋಗ ಹರಡದಂತೆ ನೊಡಿಕೊಳ್ಳಬಹುದು’ ಎಂದರು.


















