ಮುಂಬೈ: ಫಿಟ್ನೆಸ್ ರೇಸ್ ನಲ್ಲಿ ಕಮಾಲ್ ಮಾಡಿದ ದ.ಕ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಹಾಗೂ ಮಂಗಳೂರಿನ ಪ್ರಸಿದ್ಧ ಫಿಟ್ನೆಸ್ ತರಬೇತುದಾರ ಪ್ರದೀಪ್ ಕುಮಾರ್ ಆಚಾರ್ಯ ಜೋಡಿಯು ಮುಂಬೈನಲ್ಲಿ ನಡೆದ ವಿಶ್ವಪ್ರಸಿದ್ಧ ‘ಹೈರಾಕ್ಸ್’ (HYROX) ಜಾಗತಿಕ ಫಿಟ್ನೆಸ್ ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಅಪರೂಪದ ಸಾಧನೆ ಮಾಡಿದೆ.

. Ad Widget . Ad Widget

ಮುಂಬೈನ ಗೋರೆಗಾಂವ್‌ನಲ್ಲಿರುವ ನೆಸ್ಕೋ ಸೆಂಟರ್‌ನಲ್ಲಿ ಸೆಪ್ಟೆಂಬರ್ 17ರಿಂದ 20ರವರೆಗೆ ಆಯೋಜಿಸಲಾಗಿದ್ದ ಈ ಕ್ರೀಡಾಕೂಟದ ಪುರುಷರ ಡಬಲ್ಸ್ ವಿಭಾಗದಲ್ಲಿ ಕಣಕ್ಕಿಳಿದಿದ್ದ ಈ ಜೋಡಿಯು, ಅತ್ಯಂತ ಕಠಿಣ ಸವಾಲುಗಳನ್ನು ಮೀರಿ ನಿಗದಿತ ಗುರಿ ತಲುಪಿದೆ. ಅಂತರರಾಷ್ಟ್ರೀಯ ಪವರ್‌ಲಿಫ್ಟರ್ ಹಾಗೂ ‘ಕಾಷಾರ್ಪ್ ಫಿಟ್ನೆಸ್’ ಸಂಸ್ಥೆಯ ಪ್ರದೀಪ್ ಕುಮಾರ್ ಆಚಾರ್ಯ ಅವರೊಂದಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಜೋಡಿಯಾಗಿ ಭಾಗವಹಿಸಿದ್ದರು. ಈ ಜೋಡಿಯು ಒಟ್ಟು 8 ಕಿಲೋಮೀಟರ್ ಓಟ ಹಾಗೂ 8 ಅತ್ಯಂತ ಕಠಿಣ ಫಂಕ್ಷನಲ್ ವ್ಯಾಯಾಮಗಳನ್ನು ಒಳಗೊಂಡ ಸಂಪೂರ್ಣ ರೇಸ್ ಅನ್ನು ಕೇವಲ 1 ಗಂಟೆ, 39 ನಿಮಿಷ ಮತ್ತು 9 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ದಾಖಲೆ ಬರೆದಿದೆ. ಜರ್ಮಿನಿಯಲ್ಲಿ 2017ರಲ್ಲಿ ಆರಂಭಗೊಂಡ ‘ಹೈರಾಕ್ಸ್’ ಜಗತ್ತಿನ ಅತ್ಯಂತ ಪ್ರಸಿದ್ಧ ಒಳಾಂಗಣ (Indoor) ಫಿಟ್ನೆಸ್ ಸ್ಪರ್ಧೆಯಾಗಿದೆ.

. Ad Widget . . Ad Widget . Ad Widget

ಇದು ಕೇವಲ ಓಟವಲ್ಲದೆ, ಪ್ರತಿಯೊಬ್ಬ ಕ್ರೀಡಾಪಟುವಿನ ದೈಹಿಕ ಶಕ್ತಿ, ಸ್ಟ್ಯಾಮಿನಾ, ಸಹಿಷ್ಣುತೆ ಮತ್ತು ತಂಡದ ಒಗ್ಗಟ್ಟನ್ನು ಪರೀಕ್ಷಿಸುತ್ತದೆ. ಈ ಸ್ಪರ್ಧೆಯಲ್ಲಿ ಸ್ಪರ್ಧಿಗಳು ಪ್ರತಿ 1 ಕಿಲೋಮೀಟರ್ ಓಟ ಮುಗಿಸಿದ ತಕ್ಷಣ ಒಂದು ನಿಗದಿತ ಫಂಕ್ಷನಲ್ ವ್ಯಾಯಾಮ ಕೇಂದ್ರಕ್ಕೆ ತೆರಳಿ ವರ್ಕ್‌ಔಟ್ ಪೂರ್ಣಗೊಳಿಸಬೇಕು. ಹೀಗೆ ಒಟ್ಟು 8 ಕಿಲೋಮೀಟರ್ ಓಟದ ಜೊತೆಗೆ ಸ್ಕೀಯಿಂಗ್, ಸ್ಲೆಡ್ ಪುಶ್, ಸ್ಲೆಡ್ ಪುಲ್, ಬರ್ಪೀ ಬ್ರಾಡ್ ಜಂಪ್ಸ್, ರೋಯಿಂಗ್, ಫಾರ್ಮರ್ಸ್ ಕ್ಯಾರಿ, ಸ್ಯಾಂಡ್‌ಬ್ಯಾಗ್ ಲಂಜಸ್ ಹಾಗೂ ವಾಲ್ ಬಾಲ್ಸ್ ಎಂಬ 8 ಕಠಿಣ ವ್ಯಾಯಾಮ ಕೇಂದ್ರಗಳ ಸರಣಿಯನ್ನು ಪೂರ್ಣಗೊಳಿಸಬೇಕಾಗುತ್ತದೆ.

ಜನಪ್ರಿಯ ಡಬಲ್ಸ್ ವಿಭಾಗದಲ್ಲಿ ಇಬ್ಬರೂ ಸ್ಪರ್ಧಿಗಳು 8 ಕಿಲೋಮೀಟರ್ ಓಟವನ್ನು ಒಟ್ಟಿಗೆ ಪೂರ್ಣಗೊಳಿಸಬೇಕಿದ್ದು, ವ್ಯಾಯಾಮದ ತೂಕ ಹಾಗೂ ಶ್ರಮವನ್ನು ಹಂಚಿಕೊಳ್ಳಲು ಅವಕಾಶವಿರುತ್ತದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಈ ಫಿಟ್ನೆಸ್ ಸಾಧನೆಗೆ ಕರಾವಳಿ ಭಾಗದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Leave a Comment

Your email address will not be published. Required fields are marked *